ಬೆಂಗಳೂರು : ಸಿದ್ದರಾಮಯ್ಯರನ್ನು ಸಿಎಂ ಮಾಡದೇ ಇನ್ಯಾರನ್ನ ಸಿಎಂ ಮಾಡುತ್ತಾರೆ ಎಂದು ಮಧುಗಿರಿ ಶಾಸಕ ಕೆ ಎನ್ ರಾಜಣ್ಣ ಹೇಳಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕೆ ಎನ್ ರಾಜಣ್ಣ ನಾನು ಕೂಡ ಸಿದ್ದರಾಮಯ್ಯ ಪರ ವೋಟ್ ಹಾಕಿದ್ದೆನೆ, ನನಗೆ ಸಿದ್ದರಾಮಯ್ಯರೇ ಸಿಎಂ ಆಗಬೇಕು ಎಂದು ಹೇಳಿದರು.
ಸಾಮಾನ್ಯ ವ್ಯಕ್ತಿ ಕೂಡ ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಹೇಳುತ್ತಾರೆ, ಸಿದ್ದರಾಮಯ್ಯರನ್ನ ಸಿಎಂ ಮಾಡದೇ ಇನ್ಯಾರನ್ನ ಸಿಎಂ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ . ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು, ಇದೀಗ ಮುಖ್ಯಮಂತ್ರಿ ಹುದ್ದೆಗಾಗಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಪೈಪೋಟಿ ಏರ್ಪಟ್ಟಿದೆ.ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮತ್ತೊಂದು ಅವಧಿಗೆ ತಮ್ಮನ್ನು ಮುಖ್ಯಮಂತ್ರಿ ಆಗಿ ನೇಮಕ ಮಾಡುವಂತೆ ಬಿಗಿ ಪಟ್ಟು ಹಿಡಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿ ಯಾರಿಗೆ ಹೆಚ್ಚು ಶಾಸಕರು ಬೆಂಬಲ ನೀಡುತ್ತಾರೋ ಅವರನ್ನು ಸಿಎಂ ಮಾಡುವಂತೆ ಸಿದ್ದರಾಮಯ್ಯ ಅವರು ಹೈಕಮಾಂಡ್ ಗೆ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ನಡುವೆ ಸಿದ್ದರಾಮಯ್ಯ ಅವರು ಸಿಎಂ ಆಯ್ಕೆ ವಿಚಾರವಾಗಿ ಚರ್ಚೆ ನಡೆಸಲು ದೆಹಲಿಗೆ ತೆರಳಿ ಹೈಕಮಾಂಡ್ ಜೊತೆಗೆ ಚರ್ಚೆ ನಡೆಸಿ ತಮ್ಮ ವಾದವನ್ನು ಮಂಡಿಸಲಿದ್ದಾರೆ.ಕಾಂಗ್ರೆಸ್ ಪಕ್ಷದ 135 ಶಾಸಕರ ಪೈಕಿ ಬಹುತೇಕ ಶಾಸಕರು ತಮ್ಮ ಪರ ಇದ್ದಾರೆ ಅನ್ನೋ ನಂಬಿಕೆ ಸಿದ್ದರಾಮಯ್ಯ ಅವರಿಗೆ ಇದೆ. ಹೀಗಾಗಿ, ಶಾಸಕಾಂಗ ಪಕ್ಷದ ನಾಯಕನನ್ನು ಕಾಂಗ್ರೆಸ್ ಪಕ್ಷದ ನೂತನ ಶಾಸಕರೇ ಪ್ರಜಾತಾಂತ್ರಿಕವಾಗಿ ಆಯ್ಕೆ ಮಾಡಲಿ ಅಂತಾ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ. ಜೊತೆಗೆ ಒಮ್ಮೆ ಶಾಸಕಾಂಗ ಪಕ್ಷದ ನಾಯಕನಾಗಿ ಸಿಎಂ ಆದರೆ ನನಗೇ 5 ವರ್ಷಗಳ ಪೂರ್ಣಾವಧಿ ಅಧಿಕಾರ ನೀಡಬೇಕು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ.ರಾಜ್ಯಾದ್ಯಂತ ಜನಪ್ರಿಯತೆ ಇದ್ದು,ಈ ಹಿಂದೆ ನಡೆದ ಸರ್ವೆಗಳು ಕೂಡ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಬೇಕು ಎಂದು ಬಿಂಬಿಸಿವೆ. ಜೊತೆಗೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಅಹಿಂದ ಮತಗಳು ಕೈಹಿಡಿದಿದ್ದು, ಹೀಗಾಗಿ ತಮ್ಮನ್ನು ಸಿಎಂ ಮಾಡಿದ್ರೆ ಮುಂದಿನ ಲೋಕಸಭೆಚುನಾವಣೆಯಲ್ಲಿ ಅಹಿಂದ ಮತಗಳು ಕಾಂಗ್ರೆಸ್ ಗೆ ಬರಲಿವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗಿದೆ.