
ಕೋಪ್ಪಳ: ಐದಾರು ತಿಂಗಳುಗಳಿಂದ ಹಾಲಿನ ಕೊರತೆಯಿಂದ ರಾಜ್ಯದ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಹಾಲಿನ ಪುಡಿ ಪೂರೈಕೆ ಸ್ಥಗಿತಗೊಂಡಿದ್ದು, ಅಂಗನವಾಡಿಗಳಿಂದ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಹಾಲು ಸಿಗುತ್ತಿಲ್ಲ.
ರಾಜ್ಯದಲ್ಲಿ ಸುಮಾರು 70 ಸಾವಿರ ಅಂಗನವಾಡಿ ಕೇಂದ್ರಗಳಿದ್ದು, 6 ವರ್ಷದೊಳಗಿನ 36 ಲಕ್ಷ ಮಕ್ಕಳು ಪೂರ್ವ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾರೆ.
ಶನಿವಾರ ಹೊರತುಪಡಿಸಿ ವಾರದಲ್ಲಿ 5 ದಿನ ಮೊದಲು ಹಾಲು ಕೊಟ್ಟು, ಮಧ್ಯಂತರ ಅವಧಿಯಲ್ಲಿ ಉಪಾಹಾರ ನೀಡಬೇಕು. ಮನೆಗೆ ಮರಳುವ ಮುನ್ನ ಮಕ್ಕಳಿಗೆ ಊಟ ಮಾಡಿಸಬೇಕು.
ಆದರೆ, 3 ತಿಂಗಳಿನಿಂದ ಹಾಲಿನ ಪುಡಿ ಪೂರೈಕೆಯನ್ನು ಸರ್ಕಾರ ಸ್ಥಗಿತಗೊಳಿಸಿದೆ. ಇದರ ಪರಿಣಾಮ ಮಕ್ಕಳಿಗೆ ಕಿರು ಉಪಾಹಾರ, ಊಟ ಮಾತ್ರ ಕೊಡಲಾಗುತ್ತಿದೆ, ಹಾಲು ಸಿಗುತ್ತಿಲ್ಲ. ಶಾಲೆಗೆ ಬರುವ ಮಕ್ಕಳಿಗೆ ನಿತ್ಯ 15 ಗ್ರಾಂ ಪುಡಿಯಿಂದ ತಯಾರಿಸಿದ ಹಾಲು ಕೊಡಬೇಕು ಎಂಬುದು ಸರ್ಕಾರದ ನಿಯಮ. ಆದರೆ, ಇದು ಪಾಲನೆಯಾಗುತ್ತಿಲ್ಲ.
6 ತಿಂಗಳಿಂದ 3 ವರ್ಷದ ವರೆಗಿನ ಮಕ್ಕಳಿಗೆ ತಿಂಗಳಲ್ಲಿ 25 ದಿನ ಒಟ್ಟು 300 ಗ್ರಾಂ ಹಾಲಿನ ಪುಡಿ ನೀಡಲಾಗುತಿತ್ತು. ಈಗ, ರಾಜ್ಯದಲ್ಲಿರುವ 3.75 ಲಕ್ಷ ಗರ್ಭಿಣಿಯರಿಗೆ 3 ತಿಂಗಳಿನಿಂದ 8 ತಿಂಗಳವರೆಗೆ ನಿತ್ಯ 20 ಗ್ರಾಂ ಹಾಲು ನೀಡಬೇಕು. 3.68 ಲಕ್ಷ ಬಾಣಂತಿಯರಿಗೆ ಈ ಸೌಲಭ್ಯ ಸಿಗಬೇಕಿದೆ.
‘ಮಕ್ಕಳು ಮತ್ತು ಗರ್ಭಿಣಿಯರಲ್ಲಿ ನಿತ್ಯ ಹಾಲು ಕೊಡುವ ಯೋಜನೆಯಿಂದ ಅಪೌಷ್ಟಿಕತೆ ಪ್ರಮಾಣ ಕಡಿಮೆಯಾಗಿತ್ತು. ಅಪೌಷ್ಟಿಕತೆ ಸಮಸ್ಯೆ ಹೆಚ್ಚಿರುವ ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳ ಫಲಾನುಭವಿಗಳಿಗೆ ಹೆಚ್ಚಿನ ಅನುಕೂಲ ಆಗುತ್ತಿತ್ತು. ಆದರೆ, ಹಾಲಿನ ಪುಡಿ ಪೂರೈಕೆ ಸ್ಥಗಿತಗೊಂಡ ಕಾರಣ ಮಕ್ಕಳಿಗಷ್ಟೇ ಅಲ್ಲ, ಗರ್ಭಿಣಿಯರು ಮತ್ತು ಬಾಣಂತಿಯರಿಗೂ ಪುಡಿ ವಿತರಿಸಲಾಗುತ್ತಿಲ್ಲ’ ಎಂದು ಅಂಗನವಾಡಿ ಕಾರ್ಯಕರ್ತೆಯೊಬ್ಬರು ತಿಳಿಸಿದರು.
‘ಸರ್ಕಾರವು ಹಾಲಿನ ಪುಡಿ ನೀಡಿದರೂ ಅಂಗನವಾಡಿ ಕಾರ್ಯಕರ್ತೆಯರು ಹಾಲು ಕೊಡುತ್ತಿಲ್ಲ ಎಂದು ಪೋಷಕರು ಅನುಮಾನ ವ್ಯಕ್ತಪಡಿಸುತ್ತಾರೆ. 3 ತಿಂಗಳಿಂದ ಹಾಲಿನ ಪುಡಿ ಪೂರೈಕೆಯಾಗಿಲ್ಲ ಎಂದರೂ ಪೋಷಕರು ನಂಬುತ್ತಿಲ್ಲ. ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗಿದೆ’ ಎಂದು ಅಂಗನವಾಡಿ ಕಾರ್ಯಕರ್ತೆಯೊಬ್ಬರು ಅಳಲು ತೋಡಿಕೊಂಡರು.
ಕಾರಣವೇನು: 2022ರ ಸೆಪ್ಟೆಂಬರ್‌ನಲ್ಲಿ ರಾಜ್ಯದ ಜಾನುವಾರುಗಳಲ್ಲಿ ಚರ್ಮಗಂಟು ರೋಗ (ಲಂಪಿ ಸ್ಕಿನ್ ಡಿಸೀಜ್) ಕಾಣಿಸಿಕೊಂಡ ಪರಿಣಾಮ ಹಾಲು ಉತ್ಪಾದನೆ ಕಡಿಮೆಯಾಗಿದೆ. ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಪ್ರಕಾರ, ದಿನಕ್ಕೆ ₹15 ಲಕ್ಷ ಲೀಟರ್ ಹಾಲಿನ ಕೊರತೆ ಇದೆ.
‘ಚರ್ಮಗಂಟು ರೋಗದಿಂದ ಅನೇಕ ಜಾನುವಾರುಗಳು ಮೃತಪಟ್ಟವು. ಹಾಲು ಶೇಖರಣೆ ಪ್ರಮಾಣ ತೀವ್ರವಾಗಿ ಕುಸಿಯಿತು. ಈಗ ನಿಧಾನವಾಗಿ ಚೇತರಿಕೆ ಕಾಣುತ್ತಿದೆ’ ಎಂದು ಕೆಎಂಎಫ್ ಬಳ್ಳಾರಿ ವಿಭಾಗದ ಉಪ ವ್ಯವಸ್ಥಾಪಕ ಶಂಭುಕುಮಾರ್ ‘ಕಾಲಚಕ್ರ ‘ಗೆ ತಿಳಿಸಿದರು.