
ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಭೀಮನಾಯ್ಕ ತಾಲ್ಲೂಕಿನ ಕೇಶವರಾಯನಬಂಡಿ ಗ್ರಾಮದಲ್ಲಿ ಶನಿವಾರ ಚುನಾವಣೆ ಪ್ರಚಾರಕ್ಕೆ ತೆರಳಿದ್ದಾಗ ಗ್ರಾಮದ ಕೆಲ ಯುವಕರು ಪ್ರಚಾರಕ್ಕೆ ಅಡ್ಡಿಪಡಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಿದೆ.
ಯುವಕನೊಬ್ಬ ನಮ್ಮ ನಮ್ಮಲ್ಲಿ ಜಗಳ ಹಚ್ಚುತ್ತಿದ್ದಾರೆ ಎನ್ನುತ್ತಿದ್ದಂತೆ, ಗ್ರಾಮದ ಕಾಂಗ್ರೆಸ್ ಮುಖಂಡರು ವಾಗ್ವಾದಕ್ಕಿಳಿದರು. ಬಳಿಕ ಪರಸ್ಪರ ಮಾತಿನ ಚಕಮಕಿ ನಡೆದಿದೆ.
ಯಜಮಾನ್ರು ಮಾತ್ರ ಓಟು ಹಾಕ್ತಾರಾ? ನಾವೇನು ಓಟು ಹಾಕಲ್ವಾ? ಎಂದು ಯುವಕ ಆಕ್ರೋಶ ಹೊರಹಾಕಿದನು. ಗ್ರಾಮದ ಮುಖಂಡ ಈಶಪ್ಪ ಎಂಬುವರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲೀಡ್ ಕೊಟ್ಟೀವಿ, ಈಸಾರಿನೂ ಕೊಡ್ತೀವಿ ಎನ್ನುತ್ತಾರೆ. ಕೆಲವರು ವಿಡಿಯೊ ಮಾಡುವುದಕ್ಕೆ ಅಡ್ಡಿ ಪಡಿಸುತ್ತಾರೆ. ಮೊಬೈಲ್ ಅವರು ಕೊಡಿಸಿಲ್ಲ, ನನ್ನ ಮೊಬೈಲ್ ನಲ್ಲಿ ನಾನು ವಿಡಿಯೊ ಮಾಡುವೆ ಎಂದು ಯುವಕ ಪ್ರತ್ಯುತ್ತರ ನೀಡುತ್ತಾನೆ.
ಶಾಸಕರು ಏನೂ ಮಾತನಾಡದೆ ಮೂಕ ಪ್ರೇಕ್ಷಕರಂತೆ ನಿಂತಿದ್ದರು. ಬಳಿಕ ಪ್ರಚಾರ ಮೊಟಕುಗೊಳಿಸಿ ಹಂಪಾಪಟ್ಟಣಕ್ಕೆ ತೆರಳಿದರು.