
ಕೋಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿ.ವಿ. ಚಂದ್ರಶೇಖರ್ ಅವರ ಗೆಲುವಿಗಾಗಿ ನಗರದ ಮಂಗಳಮುಖಿಯರು ಇಲ್ಲಿನ ಕೊಟಗಾರಗೇರಾ ಓಣಿಯಿಂದ ಜವಾಹರ್ ರಸ್ತೆಯ ಮಾರ್ಗದ ಮೂಲಕ ಗವಿಮಠದ ವರೆಗೂ ದೀರ್ಘ ದಂಡ ನಮಸ್ಕಾರ ಹಾಕಿ ಗಮನ ಸೆಳೆದರು.
ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭ್ಯರ್ಥಿಗಳ ಗೆಲುವಿಗಾಗಿ ಹಲವಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಕಳೆದ ಕೆಲವು ದಿನಗಳಿಂದ ದೀರ್ಘ ದಂಡ ನಮಸ್ಕಾರ ಹಾಕಿ ಗಮನ ಸೆಳೆಯುತ್ತಿದ್ದಾರೆ. ಇತ್ತೀಚಿಗೆ ಕೊಪ್ಪಳ ಕಾಂಗ್ರೆಸ್ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ್ ಅವರ ಗೆಲುವಿಗಾಗಿ ಮಂಗಳಾಪುರ ಗ್ರಾಮದ ವ್ಯಕ್ತಿ ಓರ್ವ ಕೊಪ್ಪಳ ನಗರದಲ್ಲಿ ದೀರ್ಘ ದಂಡ ನಮಸ್ಕಾರ ಹಾಕಿ ಗಮನ ಸೆಳೆದಿದ್ದರು. ಇದಲ್ಲದೆ ಜೆಡಿಎಸ್ ಅಭ್ಯರ್ಥಿ, ಸಿ.ವಿ ಚಂದ್ರಶೇಖರ್ ಅವರ ಗೆಲುವಿಗಾಗಿ ಇತ್ತೀಚೆಗೆ ಕೆಲವು ಅಭಿಮಾನಿಗಳು ಕುವೆಂಪು ನಗರದಿಂದ ಗವಿಮಠದ ಆವರಣದ ವರೆಗೂ ದೀರ್ಘ ದಂಡ ನಮಸ್ಕಾರ ಹಾಕಿ ಎಲ್ಲರ ಗಮನ ಸೆಳೆದಿದ್ದರು.
ಶುಕ್ರವಾರ ಮತ್ತೆ ನಗರದ ಎಂಟಕ್ಕೂ ಹೆಚ್ಚು ಜನ ಮಂಗಳಮುಖಿಯರು ಜೆಡಿಎಸ್ ಅಭ್ಯರ್ಥಿ ಗೆಲುವಿಗಾಗಿ ದೀರ್ಘ ದಂಡ ನಮಸ್ಕಾರ ಹಾಕಿ ಗಮನ ಸೆಳೆದಿದ್ದಾರೆ. ದಾರಿ ಉದ್ದಕ್ಕೂ ಡೊಳ್ಳಿನ ಮೆರವಣಿಗೆ ಆರತಿಯನ್ನು ಹಿಡಿದು ಸಿವಿಸಿ ಅವರ ಗೆಲುವಿಗೆ ಜಪ ಮಾಡಿದ್ದು ಕಂಡುಬಂದಿತು. ಆವರಣದವರೆಗೂ ಮಂಗಳಮುಖಿಯರು ದೀರ್ಘ ದಂಡ ನಮಸ್ಕಾರ ಹಾಕಿ ಗಮನ ಸೆಳೆದಿದ್ದಾರೆ.