ಚಾಮರಾಜನಗರ ವಿಧಾನಸಭೆ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಗೆ ಆಮಿಷ ಒಡ್ಡಿದ ಆಡಿಯೋ ವೈರಲ್ ಆದ ಬೆನ್ನಲ್ಲೇ ರಾಜ್ಯ ಚುನಾವಣಾ ಆಯೋಗ ಇದೀಗ ಎಚ್ಚೆತ್ತುಕೊಂಡಿದೆ. ಈ ಆರೋಪದ ಕುರಿತು ಸೂಕ್ತ ತನಿಖೆ ನಡೆಸುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸೂಚಿಸಿದ್ದಾರೆ.

ಚಾಮರಾಜನಗರ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಅವರು ಜೆಡಿಎಸ್ ಅಭ್ಯರ್ಥಿ ಆಲೂರು ಮಲ್ಲು ಅವರಿಗೆ ದೂರವಾಣಿ ಕರೆಯಲ್ಲಿ ಕಣದಿಂದ ಹಿಂದೆ ಸರಿಯುವಂತೆ ಹೇಳಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ಈ ಸಂಭಾಷಣೆ ಆಡಿಯೋ ಸಹ ವೈರಲ್ ಆಗಿತ್ತು.

ಇದೀಗ ದೂರವಾಣಿ ಕರೆಯ ಆಡಿಯೋ ತುಣುಕಿನ ಸತ್ಯಾಸತ್ಯತೆ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಚಾಮರಾಜನಗರ ಸ್ಥಳೀಯ ಚುನಾವಣಾಧಿಕಾರಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಆದೇಶಿಸಿದ್ದಾರೆ.

ಈ ಕುರಿತು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, “ವಿ. ಸೋಮಣ್ಣ ಅವರು ಜೆಡಿಎಸ್ ಅಭ್ಯರ್ಥಿಗೆ ಆಮಿಷ ಒಡ್ಡಿದ್ದಾರೆ ಎಂಬ ಆರೋಪ ನಮ್ಮ ಗಮನಕ್ಕೆ ಬಂದಿದೆ. ದೂರವಾಣಿ ಕರೆಯ ಆಡಿಯೋ ತುಣುಕಿನ ಸತ್ಯಾಸತ್ಯತೆ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಚುನಾವಣಾಧಿಕಾರಿಗೆ ಸೂಚಿಸಲಾಗಿದೆ,” ಎಂದು ತಿಳಿಸಿದರು.

“ಆಮಿಷ ಒಡ್ಡಿದ ಆರೋಪದ ಕುರಿತು ನೋಟಿಸ್ ಜಾರಿ ಮಾಡಲಿದ್ದಾರೆ. ಇಬ್ಬರಿಂದಲೂ ಪ್ರತಿಕ್ರಿಯೆ ಪಡೆಯಲಾಗುವುದು. ಆಡಿಯೋ ತುಣುಕು ನೈಜ ಎಂಬುದು ಸಾಭಿತಾದರೆ ವಿ. ಸೋಮಣ್ಣ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು,” ಮನೋಜ್ ಕುಮಾರ್ ಮೀನಾ ಹೇಳಿದರು.

ಇನ್ನು ಚಿಲುಮೆ ಟ್ರಸ್ಟ್ ಸಂಗ್ರಹಿಸಿದ್ದ ಮತದಾರರ ಮಾಹಿತಿಯನ್ನು ವಿದೇಶದ ಸರ್ವರ್‌ನಲ್ಲಿ ಇರಿಸಿದ್ದ ಆರೋಪದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆಗೆ ಇದ್ದ ತಡೆಯಾಜ್ಞೆ ತೆರವಿಗೆ ಪ್ರಯತ್ನ ಮಾಡಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಉತ್ತರಿಸಿದರು.

ನಾಮಪತ್ರ ಹಿಂಪಡೆಯುವಂತೆ ಒತ್ತಡ

ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಸ್ವಾಮಿಗೆ (ಮಲ್ಲು) ಎನ್ನುವವರಿಗೆ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಹಾಗೂ ಬೆಂಬಲಿಗರು ಕೆಲವು ಆಮಿಷಗಳನ್ನು ಒಡ್ಡಿ ನಾಮಪತ್ರ ಹಿಂಪಡೆಯುವಂತೆ ಒತ್ತಡ ಹಾಕಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ.

ವಿ. ಸೋಮಣ್ಣ ಹಾಗೂ ಬೆಂಬಲಿಗರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗುತ್ತಿದ್ದು, ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನಸ್ವಾಮಿಗೆ ಒಂದು ಗೂಟದ ಕಾರು ಹಾಗೂ ಮುಂದಿನ ದಿನಗಳಲ್ಲಿ ಹಣ ನೀಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

ಮೊದಲು ವಿ. ಸೋಮಣ್ಣ ಬೆಂಬಲಿಗ ಮಾತನಾಡಿದ್ದು, ನಮ್ಮದೇ ಸರ್ಕಾರ ಬರುತ್ತದೆ, ಜೆಡಿಎಸ್ ಪಕ್ಷ ಇರುವುದಿಲ್ಲ. ಯಾರಿಗೆ ಗೊತ್ತಾಗದ ರೀತಿ ನಾಮಪತ್ರ ವಾಪಸ್‌ ಪಡೆಯಿರಿ. ಸೋಮಣ್ಣ ಅವರು ಮಾತು ಕೊಟ್ಟ ಮೇಲೆ ತಪ್ಪಲ್ಲ. ನಾವೆಲ್ಲಾ ಸಾಕ್ಷಿ ಇದ್ದೇವೆ. ನಮ್ಮ ಸೋಮಣ್ಣ ಸುಳ್ಳು ಹೇಳುವ ಮನುಷ್ಯ ಅಲ್ಲ. ದೇವರ ಮುಂದೆ ನಿಂತು ನಿಮಗೆ ಈ ರೀತಿ ಮಾತು ನೀಡಿದ್ದಾರೆ ಎಂದು ಹೇಳಿದ್ದಾರೆ.

ಮಲ್ಲಿಕಾರ್ಜುನಸ್ವಾಮಿ ಈ ಬೇಡಿಕೆಗೆ ಉತ್ತರಿಸಿದ್ದು, ಈ ಬಗ್ಗೆ ಎಚ್.ಡಿ. ಕುಮಾರಸ್ವಾಮಿ ಜೊತೆ ಮಾತನಾಡುತ್ತೇನೆ. ಇದು ಪಕ್ಷದಿಂದ ಮಾಡಿರುವ ತೀರ್ಮಾನ. ನಾನು ಹೀಗೆ ಏಕಾಏಕಿ ನಾಮಪತ್ರ ವಾಪಸ್‌ ಪಡೆಯಲು ಆಗುವುದಿಲ್ಲ. ಆದರೆ ಕ್ಷೇತ್ರದಲ್ಲಿ ಏನು ಮಾಡದೇ ನ್ಯುಟ್ರಲ್ ಆಗಿರುತ್ತೇನೆ ಎಂದು ಹೇಳಿದ್ದಾರೆ.

error: Content is protected !!