ಬೆಂಗಳೂರು ಏ.22- ತೀವ್ರ ಕುತೂಹಲ ಕೆರಳಿಸಿದ್ದ ಸವದತ್ತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರತ್ನ ಮಾಮಿನಿ ಅವರ ನಾಮಪತ್ರ ಅಂಗೀಕಾರವಾಗಿದೆ. ಇದರಿಂದಾಗಿ ನಾಮಪತ್ರ ತಿರಸ್ಕøತವಾಗುವ ಭೀತಿಯಲ್ಲಿದ್ದ ಬಿಜೆಪಿ ಅಭ್ಯರ್ಥಿ ರತ್ನ ಮಾಮನಿಗೆ ಕಾನೂನು ಸಮರದಲ್ಲಿ ದೊಡ್ಡ ಗೆಲುವು ಸಿಕ್ಕಂತಾಗಿದೆ.

ಕಳೆದ ಏ.18ರಂದು ಸಲ್ಲಿಸಿದ್ದ ನಾಮಪತ್ರವನ್ನು ತಿರಸ್ಕಾರ ಮಾಡಬೇಕೆಂದು ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ್ ವೈದ್ಯ ಹಾಗೂ ಎಎಪಿಯ ಬಾಪು ಗೌಡ ಪಾಟೀಲ್ ತಕರಾರು ಅರ್ಜಿ ಸಲ್ಲಿಸಿದ್ದರು. ಚುನಾವಣಾಧಿಕಾರಿಯಾಗಿರುವ ಸವದತ್ತಿ ತಹಸೀಲ್ದಾರ್ ಡಾ.ರಾಜು ಕೊಲೇರ ಅವರು ಇಂದು ಬೆಳಗ್ಗೆ ಮೂವರು ಅಭ್ಯರ್ಥಿಗಳು ಹಾಗು ಅವರ ಪರ ವಕೀಲರ ಸಮಕ್ಷಮದಲ್ಲಿ ವಾದ-ವಿವಾದವನ್ನು ಆಲಿಸಿ ಮಧ್ಯಾಹ್ನ 1 ಗಂಟೆಗೆ ತೀರ್ಪು ನೀಡುವುದಾಗಿ ಹೇಳಿದ್ದರು.

1 ಗಂಟೆಗೆ ತೀರ್ಪು ಪ್ರಕಟಿಸಿದ ಚುನಾವಣಾಧಿಕಾರಿ ರತ್ನ ಮಾಮನಿ ಅವರು ಸಲ್ಲಿಸಿರುವ ನಾಮಪತ್ರ ಕ್ರಮಬದ್ದವಾಗಿದೆ ಎಂದು ತೀರ್ಪು ನೀಡಿ ಗೊಂದಲಕ್ಕೆ ತೆರೆ ಎಳೆದರು. ರತ್ನ ಮಾಮನಿ ಅವರು ಸಲ್ಲಿಸಿದ್ದ ನಾಮಪತ್ರ 2018ರ ಮಾದರಿಯಲ್ಲಿದೆ. ಈ ಹಿಂದೆ ಅಂದರೆ 2019ರಲ್ಲಿ ಸುಪ್ರೀಂಕೋರ್ಟ್ ನಾಮಪತ್ರ ಸಲ್ಲಿಕೆ ಸಂಬಂಧ ಐತಿಹಾಸಿಕ ತೀರ್ಪು ನೀಡಿದ್ದು ಅವರ ನಾಮಪತ್ರ ತಿರಸ್ಕರಿಸಬೇಕೆಂದು ಕೋರಿದ್ದರು.

ಫಾರಂ ಸಂಖ್ಯೆ 26ರನ್ನು ಪರಿಷ್ಕರಣೆ ಮಾಡಿದ್ದು, ಇದರಡಿ ಪ್ರಮಾಣಪತ್ರ ಸಲ್ಲಿಸಿಲ್ಲ. ಇವೆಲ್ಲ ಅಂಶಗಳನ್ನು ಪರಿಗಣಿಸಿ ರತ್ನ ಮಾಮನಿ ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಇಲ್ಲವೇ ಅನೂರ್ಜಿತಗೊಳಿಸಬೇಕೆಂದು ಆಗ್ರಹಿಸಿದರು.

ಅಲ್ಲದೆ ರತ್ನ ಮಾಮನಿ ಅವರು ಏ.20ರಂದು 2ನೇ ಬಾರಿಗೆ ನಾಮಪತ್ರವನ್ನು ಸಮಯದ ಅವಧಿ ಮುಗಿದ ಬಳಿಕ ಅಂದರೆ ರಾತ್ರಿ 7.38ಕ್ಕೆ ಸಲ್ಲಿಸಿದ್ದಾರೆ. ಇದು ವೆಬ್‍ಸೈಟ್‍ನಲ್ಲೂ ದಾಖಲಾಗಿದೆ. ಚುನಾವಣಾ ಆಯೋಗದ ನಿಯಮದ ಪ್ರಕಾರ ಅಭ್ಯರ್ಥಿಯು ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ಸಲ್ಲಿಸಬೇಕು, ಯಾವ ಆಧಾರದ ಮೇಲೆ ರಾತ್ರಿ 7.38ರಲ್ಲಿ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಿದ್ದೀರಿ ಎಂದು ಪ್ರಶ್ನೆ ಮಾಡಿದರು.

ಅಲ್ಲದೆ ಮೊದಲ ನಾಮಪತ್ರದಲ್ಲಿ ಯಾವುದಾದರೊಂದು ಕಲಂ ಖಾಲಿ ಬಿಟ್ಟಿದ್ದರೆ ಮಾತ್ರ ಇನ್ನೊಂದು ಪ್ರತಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಮೊದಲ ಅಫಿಡೆವಿಟ್‍ನಲ್ಲಿ ಎಲ್ಲ ಕಾಲಂ ಭರ್ತಿ ಮಾಡಿಲಾಗಿದೆ. 2ನೇ ಬಾರಿ ಅವಕಾಶ ನೀಡಿರುವುದು ಕಾನೂನು ಉಲ್ಲಂಘನೆಯಾಗಿದೆ. ಹೀಗಾಗಿ ನಾಮಪತ್ರ ತಿರಸ್ಕರಿಸುವಂತೆ ಎದುರಾಳಿ ಅಭ್ಯರ್ಥಿಗಳು ಆಗ್ರಹಿಸಿದ್ದರು.

ನಾಮಪತ್ರ ಅಂಗೀಕಾರವಾದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ರತ್ನ ಮಾಮನಿ, ನಾನು ಯಾವುದೇ ತಪ್ಪು ಮಾಡಿಲಿಲ್ಲ. ನಮ್ಮ ಎದುರಾಳಿಗಳು ಸುಮ್ಮನೆ ಆಧಾರರಹಿತ ಆರೋಪಗಳನ್ನು ಮಾಡಿದ್ದರು. ಅಂತಿಮವಾಗಿ ಕಾನೂನಿಗೆ ಗೆಲುವಾಗಿದೆ. ಖಂಡಿತವಾಗಿಯೂ ಈ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

error: Content is protected !!