ಕೋಪ್ಪಳ/ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ವಾಯುಯಾನ ಕಂಟಕ ಇರಬಹುದೇನೋ ಎನ್ನುವಂಥ ಪ್ರಕರಣಗಳು ಒಂದರ ಹಿಂದೊಂದರಂತೆ ನಡೆದಿವೆ. ನಿನ್ನೆಯಷ್ಟೇ ವಿಮಾನ ಪ್ರಯಾಣದಲ್ಲಿ ತೊಂದರೆ ಅನುಭವಿಸಿದ್ದ ಅವರು ಕಾಕತಾಳೀಯ ಎಂಬಂತೆ ಇಂದು ಹೆಲಿಕಾಪ್ಟರ್​ನಲ್ಲಿ ಪ್ರಯಾಣಿಸುವಾಗ ತೊಂದರೆ ಎದುರಿಸುವಂತಾಗಿದೆ.

ಸಿದ್ದರಾಮಯ್ಯ ಅವರು ಇಂದು ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣಕ್ಕೆ ಹೆಲಿಕಾಪ್ಟರ್​ನಲ್ಲಿ ಆಗಮಿಸುವಾಗ ಅದು ನಿಗದಿತ ಸ್ಥಳದಲ್ಲಿ ಇಳಿಯದೇ ಮುಂದಕ್ಕೆ ಹೋಗಿದೆ. ದಾರಿ ತಪ್ಪಿದಂತಾದ ಹೆಲಿಕಾಪ್ಟರ್​ ಸುಮಾರು ಹತ್ತು ನಿಮಿಷಗಳ ಕಾಲ ಸುತ್ತಾಡಿ ಮರಳಿದೆ. ಸಂಪರ್ಕದ ಕೊರತೆ ಹಿನ್ನೆಲೆಯಲ್ಲಿ ಗುರಿ ಬಿಟ್ಟು ಮುಂದೆ ಸಾಗಿದ ಹೆಲಿಕಾಪ್ಟರ್ ಕೊನೆಗೂ ಪೋನ್ ಮೂಲಕ ಮಾಜಿ ಸಚಿವ ಶಿವರಾಜ ತಂಗಡಗಿ ನೀಡಿದ್ದ ಮಾರ್ಗದರ್ಶನಂತೆ ನಿಗದಿತ ಸ್ಥಳದಲ್ಲಿ ಇಳಿಯಿತು.

ಮಾಜಿ ಸಿಎಂ ಸಿದ್ದರಾಮಯ್ಯ ನಿನ್ನೆ ವಿಮಾನ ಪ್ರಯಾಣ ಸಂದರ್ಭ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪರದಾಡುವಂತಾಗಿತ್ತು. ಹತ್ತು ನಿಮಿಷಗಳಿಂದ ಹುಬ್ಬಳ್ಳಿ ನಿಲ್ದಾಣದಲ್ಲಿ ಏಕಾಂಗಿ ಕುಳಿತುಕೊಳ್ಳುವಂತಾಗಿತ್ತು. ಅವರಿದ್ದ ವಿಮಾನ ಬೆಳಗಾವಿ ವಿಮಾನನಿಲ್ದಾಣದಲ್ಲಿ ಲ್ಯಾಂಡ್ ಆಗುವ ಬದಲು ಹುಬ್ಬಳ್ಳಿ ವಿಮಾನನಿಲ್ದಾಣದಲ್ಲಿ ಲ್ಯಾಂಡ್ ಆಗಿತ್ತು. ಹವಾಮಾನದ ವೈಪರೀತ್ಯದ ಹಿನ್ನೆಲೆಯಲ್ಲಿ ಹೀಗಾಗಿತ್ತು ಎನ್ನಲಾಗಿದೆ. ಬಳಿಕ ಹುಬ್ಬಳ್ಳಿಯಿಂದ ರಸ್ತೆ ಮೂಲಕ ಯಮಕನಮರಡಿಗೆ ತೆರಳಿದ ಅವರು ಅಲ್ಲಿನ ಬಹಿರಂಗ ಸಭೆಯಲ್ಲಿ ಪಾಲ್ಗೊಂಡರು.

error: Content is protected !!