ಬೆಂಗಳೂರು ಏಪ್ರಿಲ್13:‌ ಕರ್ನಾಟಕ ವಿಧಾನಸಭೆ 2023ರ ವೇಳಾಪಟ್ಟಿಯಂತೆ ಈಗಾಗಲೇ ಚುನಾವಣೆ ಘೋಷಿಸಿದ್ದು, ಮೇ 10 ರಂದು ಮತದಾನ ಹಾಗೂ ಮೇ 13 ರಂದು ಮತ ಎಣಿಕೆಯನ್ನು ನಿಗದಿಪಡಿಸಲಾಗಿದೆ. ಗುರುವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಏಪ್ರಿಲ್ 20 ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ.

ನಾಮಪತ್ರಗಳನ್ನು ಸಲ್ಲಿಸಲು ಸಮಯವನ್ನು ನಿಗದಿಪಡಿಸಲಾಗಿದ್ದು, ಆಯಾ ವಿಧಾನಸಭಾ  ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ. ಮೊದಲ ದಿನವೇ 221 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಬಿಜೆಪಿಯ 27 ಅಭ್ಯರ್ಥಿಗಳು, ಕಾಂಗ್ರೆಸ್‌ ನ 26, 10 ಎಎಪಿ,12 ಜೆಡಿಎಸ್,‌ 45 ಸ್ವತಂತ್ರ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದ್ದಾರೆ.

ಕಡೂರು ಬಿಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ನಾಮಪತ್ರ ಸಲ್ಲಿಕೆ

ಚಿಕ್ಕಮಗಳೂರು ಜಿಲ್ಲೆಯ ಕಡೂರು ಬಿಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ಅವರು ಮೊದಲ ದಿನವೇ ತಮ್ಮ ಉಮೇದುವಾರಿಗೆ ಸಲ್ಲಿಸಿದ್ದಾರೆ. ಬೆಳ್ಳಿ ಪ್ರಕಾಶ್ ಅವರು ತಮ್ಮ ಪತ್ನಿ ಕವಿತಾ, ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ. ರವಿ ಜೊತೆ ಕಡೂರು ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಸಿದ ಎಸ್.ಟಿ.ಸೋಮಶೇಖರ್

ಯಶವಂತಪುರ ಕ್ಷೇತ್ರದಿಂದ ಮರು ಆಯ್ಕೆ ಬಯಸಿ ಸಚಿವ ಎಸ್.ಟಿ.ಸೋಮಶೇಖರ್ ಅವರು ನಾಮಪತ್ರ ಸಲ್ಲಿಸಿದರು. ಪತ್ನಿ ಶ್ರೀಮತಿ ರಾಧಾ, ಪುತ್ರ ನಿಶಾಂತ್, ಸೂಚಕ ಅನಿಲ್ ಚೆಳಗೆರೆ ಮತ್ತು ರಂಗರಾಜ್ ಜೊತೆ ಹೇರೋಹಳ್ಳಿಯ ಬಿಬಿಎಂಪಿ ಚುನಾವಣಾಧಿಕಾರಿ ಕಚೇರಿಗೆ ತೆರಳಿ ಅವರು ನಾಮಪತ್ರ ಸಲ್ಲಿಸಿದರು.

ಸಚಿವ ಸಿ.ಸಿ ಪಾಟೀಲ್ ನಾಮಪತ್ರ ಸಲ್ಲಿಕೆ

ನರಗುಂದ ಕ್ಷೇತ್ರದಿಂದ ಮರು ಆಯ್ಕೆ ಬಯಸಿ ಸಚಿವ ಸಿ.ಸಿ ಪಾಟೀಲ್ ಅವರು ನಾಮಪತ್ರ ಸಲ್ಲಿಸಿದರು. ಬಾಗಲಕೋಟೆ ಸಂಸದ ಗದ್ದಿಗೌಡರ್, ವಿಧಾನ ಪರಿಷತ್ ಸದಸ್ಯ ಸಂಕನೂರು ಮತ್ತು ಇತರ ಪ್ರಮುಖರು ಇದ್ದರು. ಕ್ಷೇತ್ರ ಚುನಾವಣಾ ಅಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಾಯಿತು.

ಕುಟುಂಬದವರ ಜೊತೆ ತೆರಳಿ ನಾಮಪತ್ರ ಸಲ್ಲಿಸಿದ ಡಾ.ಸುಧಾಕರ್

ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಮರು ಆಯ್ಕೆ ಬಯಸಿರುವ ಡಾ.ಕೆ ಸುಧಾಕರ್‌ ಕಟುಂಬದವರೊಂದಿಗೆ ಚುನಾವಣಾ ಅಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.

ಸಚಿವ ಮುರುಗೇಶ್ ನಿರಾಣಿ ನಾಮಪತ್ರ ಸಲ್ಲಿಕೆ

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಮರು ಆಯ್ಕೆ ಬಯಸಿ ತಮ್ಮ ತವರು ಕ್ಷೇತ್ರ ಬೀಳಗಿಯಲ್ಲಿ ಸಾಂಕೇತಿಕವಾಗಿ ಗುರುವಾರ ನಾಮಪತ್ರ ಸಲ್ಲಿಸಿದರು.

ಈ ವೇಳೆ ಬಾಗಲಕೋಟೆ ಲೋಕಸಭಾ ಸದಸ್ಯರಾದ ಪಿ.ಸಿ.ಗದ್ದಿಗೌಡರ್, ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿ, ಸ್ಥಳೀಯ ಮುಖಂಡರಾದ ಈರಣ್ಣ ಗಿಡ್ಡಪ್ಪಗೋಳ, ಮಲ್ಲಿಕಾರ್ಜುನ ಅಂಗಡಿ, ಬಿ. ಜಿ. ರೇವಡಿಗಾರ, ಶಂಭೋಜಿ ಇನ್ನೂ ಅನೇಕ ಪಕ್ಷದ ಪ್ರಮುಖರು ಹಾಗೂ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ತಾಲ್ಲೂಕು ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿ ತಹಸೀಲ್ದಾರ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಗುಂಡ್ಲುಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗಣೇಶ್‌ ಪ್ರಸಾದ್ ನಾಮಪತ್ರ ಸಲ್ಲಿಕೆ

ಗುಂಡ್ಲುಪೇಟೆಯಲ್ಲಿ ಮರು ಆಯ್ಕೆ ಬಯಸಿರುವ ಗಣೇಶ್‌ ಪ್ರಸಾದ್‌ ಗುರುವಾರ ಪಟ್ಟಣದ ತಾಲೂಕು ಕಚೇರಿ ಸಭಾಭವನದಲ್ಲಿ ತಮ್ಮ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಕೆ ಮಾಡಿದರು. ಇನ್ನೂ ಬೆಂಗಳೂರಿನ ಚಿಕ್ಕಪೇಟೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಗಂಗಾಬಿಕೆ‌ ಮಲ್ಲಿಕಾರ್ಜುನ್ ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು.

ಬಂಡಾಯ ಅಭ್ಯರ್ಥಿಯಾಗಿ ಹೂಡಿ ವಿಜಯ್ ಕುಮಾರ್ ನಾಮಪತ್ರ ಸಲ್ಲಿಕೆ

ಕೋಲಾರದ ಮಾಲೂರು ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಹೂಡಿ ವಿಜಯ್ ಕುಮಾರ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮಾಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಹೂಡಿ ವಿಜಯ್ ಕುಮಾರ್ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿತ್ತು. ಈ ಹಿನ್ನೆಲೆ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಮಾಜಿ ಸಚಿವ ಬಿಆರ್​ ಯಾವಗಲ್​ ನಾಮಪತ್ರಿಕೆ ಸಲ್ಲಿಕೆ

ಮಾಜಿ‌ ಸಚಿವ ಬಿಆರ್ ಯಾವಗಲ್ ಅವರು ಗದಗ ಜಿಲ್ಲೆಯ ನರಗುಂದ ಪಟ್ಟಣದ ಮಿನಿ ವಿಧಾನ ಸೌಧದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕೆಲವು ಬೆಂಬಲಿಗರ ನರಗುಂದ ತಾಲೂಕು ಕಚೇರಿಗೆ ತೆರಳಿ ಚುನಾವಣಾಧಿಕಾರಿ ಗಂಗಪ್ಪ ಅವರಿಗೆ ನಾಮ ಪತ್ರ ಸಲ್ಲಿಕೆ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ 9 ಅಭ್ಯರ್ಥಿಗಳಿಂದ 10 ನಾಮಪತ್ರ ಸಲ್ಲಿಕೆ

ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಮಂಜುನಾಥ ಜಿ.ಬಿ ಹಾಗೂ ಪ್ರಕಾಶ್.ಸಿ ಪಕ್ಷೇತರ ಅಭ್ಯರ್ಥಿಗಳಾಗಿ, ಮೇಲುಕೋಟೆ ಕ್ಷೇತ್ರದಿಂದ ಪಿ.ವಿ.ಸುಂದ್ರಮ್ಮ ಸರ್ವೋದಯ ಕರ್ನಾಟಕ ಪಕ್ಷ ಹಾಗೂ ಮಹೇಂದ್ರ ಕುಮಾರ್ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ, ಶ್ರೀರಂಗಪಟ್ಟಣದಲ್ಲಿ ಮೋಹನ್‌ ಕುಮಾರ್ಕಿರಂಗೂರು ಪಾಪು 2 ನಾಮಪತ್ರಗಳನ್ನು ಪಕ್ಷೇತರ ಅಭ್ಯರ್ಥಿಯಾಗಿ, ಅರುಣ್‌ಕುಮಾರ್.ಹೆಚ್.ಎಂ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ನಾಮಪತ್ರ ಸಲ್ಲಿಸಿದ್ದಾರೆ

ನಾಗಮಂಗಲ ಕ್ಷೇತ್ರದ ಯೋಗೇಶ್‌ ಪಕ್ಷೇತರರಾಗಿ, ಜಿ.ಎಂ.ರಮೇಶ್ ಕರ್ನಾಟಕ ರಾಷ್ಟ್ರ ಸಮಿತಿ ವತಿಯಿಂದ, ಕೆ.ಆರ್‌. ಪೇಟೆಯಲ್ಲಿ ಕಿಶೋರ್‌ ಎ.ಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಒಂದೊಂದು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಎಸ್.ಎಸ್. ಮಲ್ಲಿಕಾರ್ಜುನ್ ನಾಮಪತ್ರ ಸಲ್ಲಿಕೆ

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್.ಎಸ್. ಮಲ್ಲಿಕಾರ್ಜುನ್ ಬುಧವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು. ಎಸ್‌.ಎಸ್‌.ಮಲ್ಲಿಕಾರ್ಜುನ್‌ ಅವರು ಮಹಾನಗರ ಪಾಲಿಕೆಯ ಮೇಯರ್ ಕಚೇರಿಯಲ್ಲಿ ಉತ್ತರ ಕ್ಷೇತ್ರದ ಚುನಾವಣಾಧಿಕಾರಿ ಶ್ರೀನಿವಾಸ್ ಅವರಿಗೆ ನಾಮಪತ್ರ ಸಲ್ಲಿಕೆ ಮಾಡಿದರು. ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಜೊತೆ ಆಗಮಿಸಿದ ಮಲ್ಲಿಕಾರ್ಜುನ್ ಅವರು, ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಕೆ ಮಾಡುವ ಮೂಲಕ ಅಧಿಕೃತವಾಗಿ ಕಣಕ್ಕಿಳಿದಿದ್ದಾರೆ

ಮೈಸೂರು ಜಿಲ್ಲೆಯಲ್ಲಿ 16 ನಾಮಪತ್ರ ಸಲ್ಲಿಕೆ

ಕೃಷ್ಣರಾಜ ಕ್ಷೇತ್ರದಿಂದ ಎಸ್‌ಯುಸಿಐಸಿ ಅಭ್ಯರ್ಥಿಯಾಗಿ ಪಿ.ಎ.ಸಂಧ್ಯಾ ಹಾಗೂ ಕರ್ನಾಟಕ ರಾಷ್ಟ್ರ ಸಮಿತಿಯಿಂದ ಸೋಮಸುಂದರ್ ಕೆ.ಎಸ್., ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಿ ಸುಮಲತಾ ಎಸ್., ನರಸಿಂಹರಾಜ ಕ್ಷೇತ್ರದಿಂದ ಎಸ್‌ಡಿಪಿಐಯಿಂದ ಅಬ್ದುಲ್ ಮಜೀದ್ ಕೆ.ಎಚ್., ಆಮ್ ಆದ್ಮ ಪಕ್ಷ (ಆಪ್)ದಿಂದ ಧರ್ಮಶ್ರೀ, ಕರ್ನಾಟಕ ರಾಷ್ಟ್ರಸಮಿತಿ ಪಕ್ಷದಿಂದ ಸುಂದರ್ ಪ್ರೇಮ್‌ಕುಮಾರ್, ಜೆಡಿಎಸ್ ಮತ್ತು ಇಂಡಿಯನ್ ನ್ಯೂ ಕಾಂಗ್ರೆಸ್ ಪಕ್ಷಗಳೆರಡರ ಅಭ್ಯರ್ಥಿಯಾಗಿ ಅಯೂಬ್ ಖಾನ್ ಎನ್ನುವವರು ನಾಮಪತ್ರ ಸಲ್ಲಿಸಿದ್ದಾರೆ.

ಪಿರಿಯಾಪಟ್ಟಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಕೆ.ವೆಂಕಟೇಶ್ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಆರ್, ತುಂಗಾ ಶ್ರೀನಿವಾಸ್, ಹುಣಸೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಗಳಾಗಿ ತಿಮ್ಮಾ ಭೋವಿ ಹಾಗೂ ಬೀರೇಶ್‌, ವರುಣ ಕ್ಷೇತ್ರದಿಂದ ಕರ್ನಾಟಕ ರಾಷ್ಟ್ರ ಸಮಿತಿ ಅಭ್ಯರ್ಥಿಯಾಗಿ ರವಿಕುಮಾರ್ ಎಂ. ಕೃಷ್ಣರಾಜನಗರ ಕ್ಷೇತ್ರದಿಂದ ಪರಮೇಶ್ ಕೆಆರ್‌ಎಸ್ ಪಕ್ಷದಿಂದ, ಚಾಮುಂಡೇಶ್ವರಿ ಕ್ಷೇತ್ರದಿಂದ ಕರ್ನಾಟಕ ರಾಷ್ಟ್ರ ಸಮಿತಿಯಿಂದ ಎಂ.ಎಸ್ .ಪ್ರವೀಣ್ ಕಣಕ್ಕಿಳಿದಿದ್ದಾರೆ.

ಸುನೀತಾ ಪುಟ್ಟಣ್ಣಯ್ಯ ನಾಮಪತ್ರ ಸಲ್ಲಿಕೆ.

ಮೇಲುಕೋಟೆ ಕ್ಷೇತ್ರದಿಂದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿ ಪಿವಿ ಸುಂದ್ರಮ್ಮ ಗುರುವಾರ ನಾಮಪತ್ರ ಸಲ್ಲಿಸಿದರು. ಮೊದಲ ದಿನವಾದ್ದರಿಂದ ನಾನು ನಾಮಪತ್ರ ಸಲ್ಲಿಸಿದ್ದೇನೆ, ನಂತರ ವಾಪಸ್ ಪಡೆಯುತ್ತೇನೆ ಅಧಿಕೃತವಾಗಿ ಬಿ.ಫಾರಂ ಜೊತೆ ಕರ್ನಾಟಕ ಸರ್ವೊದಯ ಪಕ್ಷದ ಅಭ್ಯರ್ಥಿಯಾಗಿ ನನ್ನ ಪುತ್ರ ದರ್ಶನ್ ಪುಟ್ಟಣ್ಣಯ್ಯ ಏ.15 ಹಾಗೂ ಏ.20ರಂದು 2 ನಾಮಪತ್ರ ಸಲ್ಲಿಸಲಿದ್ದಾನೆ ಎಂದರು.

ಬಳ್ಳಾರಿ ನಗರ ಕ್ಷೇತ್ರದಲ್ಲಿ ಮೊದಲ ದಿನ ಇಬ್ಬರಿಂದ ನಾಮಪತ್ರ ಸಲ್ಲಿಕೆ

ಕೆಆರ್‌ಎಸ್ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ರೆಡ್ಡಿ ಹಾಗೂ ಎಸ್‌ಯುಸಿಐ ಪಕ್ಷದ ಅಭ್ಯರ್ಥಿ ಆರ್.ಸೋಮಶೇಖರ ಗೌಡ ಮಹಾನಗರ ಪಾಲಿಕೆಯ ಚುನಾವಣೆ ಅಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

error: Content is protected !!