
ಕೊಪ್ಪಳ: ಕಾರಟಗಿ ತಾಲೂಕು ಸ್ವೀಪ್ ಸಮಿತಿ ಹಾಗೂ ಮರ್ಲಾನಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ಏಪ್ರಿಲ್ 13ರಂದು ಸ್ವೀಪ್ ಕಾರ್ಯಕ್ರಮ ನಡೆಯಿತು. ಮತದಾರರ ಜಾಗೃತಿಗಾಗಿ ವಿಶೇಷಚೇತನರು ಮರ್ಲಾನಹಳ್ಳಿ ಗ್ರಾಮದಿಂದ ಕಾರಟಗಿ ಎಪಿಎಂಸಿಯವರಿಗೆ ಬೈಕ್ ರ‍್ಯಾಲಿ ಜಾಥಾ ನಡೆಸಿ, ವಿಶೇಷ ಅರಿವು ಮೂಡಿಸಿದರು.
ಮತದಾರರ ಜಾಗೃತಿ ಬೈಕ್ ರ‍್ಯಾಲಿಗೆ ತಾಲೂಕು ಪಂಚಾಯತ ಸಹಾಯಕ ನಿರ್ದೇಶಕರಾದ ವೈ.ವನಜಾ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿ, ವಿಶೇಷಚೇತನರಿಗೆ ಈಗ ಮತ ಹಾಕಲು ಯಾವುದೇ ಅಡ್ಡಿ ಇಲ್ಲ. ಚುನಾವಣಾ ಆಯೋಗ ಅವರಿಗಾಗಿ ಎಲ್ಲಾ ರೀತಿ ಸೌಲಭ್ಯ ಕಲ್ಪಿಸಿದೆ. ಈ ಅವಕಾಶವನ್ನು ಬಳಸಿಕೊಂಡು ಸದೃಢ ಭಾರತಕ್ಕಾಗಿ ತಪ್ಪದೇ ಮತ ಹಾಕಬೇಕು. ಯಾವುದೇ ಕಾರಣಕ್ಕೂ ವಿಶೇಷಚೇತನ ಮತದಾರರು ಮತದಾನದಿಂದ ಹೊರಗುಳಿಯಬಾರದು. ಸಾರ್ವಜನಿಕರು ಸಹ ಸ್ವಯಂ ಪ್ರೇರಣೆಯಿಂದ ತಮ್ಮ ಜವಾಬ್ದಾರಿಯನ್ನರಿತು ಯಾವುದೇ ಆಸೆ ಆಮೀಷಕ್ಕೆ ಒಳಗಾಗದೇ, ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.

ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಾದ ಸಲ್ಮಾ ಬೇಗಂ ಅವರು ಮಾತನಾಡಿ, ವಿಶೇಷಚೇತನರಿಗೆ ಮತದಾನ ಮಡಲು ಅಗತ್ಯ ಸೌಲಭ್ಯ ಕಲ್ಪಿಸುವ ವಿಷಯದಲ್ಲಿ ಚುನಾವಣಾ ಆಯೋಗವು ಮಹತ್ವದ ನಿರ್ಧಾರ ಕೈಗೊಂಡಿದೆ. ಮತದಾ ಯಾವುದೇ ತೊಂದರೆಯಾಗದಂತೆ, ಸುಲಭ ರೀತಿಯಲ್ಲಿ ಮತದಾನ ಮಾಡುವುದಕ್ಕೆ ಅವಕಾಶ ಕಲ್ಪಿಸಿದೆ. ಆದ್ದರಿಂದ ವಿಶೇಷಚೇತನ ಮತದಾರರು ತಪ್ಪದೇ ಮತ ಹಾಕಬೇಕು ಎಂದು ಮನವಿ ಮಾಡಿದರು.
ತಾಲೂಕು ವಿವಿದ್ದೊದೇಶ ಪುನರ್ವಸತಿ ಕಾರ್ಯಕರ್ತೆ ಮಂಜುಳಾ ಪುರಾಣಿಕ ಅವರು ಮತದಾನ ಪ್ರತಿಜ್ಞಾ ವಿಧಿ ಭೋದಿಸಿದರು. ಬಳಿಕ ಮಾತನಾಡಿ, ಮತಗಟ್ಟೆಗೆ ತೆರಳಿ ತಪ್ಪದೆ ಮತ ಚಲಾಯಿಸಿ, ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾನದಲ್ಲಿ ಮತದಾನವಾಗಲು ಸಹಕರಿಸಬೇಕು. ಮತದಾನ ನಮ್ಮ ಹಕ್ಕು, ಪ್ರಜಾಪ್ರಭುತ್ವ ಬಲಪಡಿಸಲು ತಪ್ಪದೆ ಮತ ಚಲಾಯಿಸಬೇಕು ಎಂದರು.
ಬೈಕ್ ರ‍್ಯಾಲಿ: ಮತದಾನ ಜಾಗೃತಿಗಾಗಿ ವಿಶೇಷ ಚೇತನರು ಹಮ್ಮಿಕೊಂಡ ಬೈಕ್ ರ‍್ಯಾಲಿಯು ತಾಲ್ಲೂಕಿನ ಮರ್ಲಾನಹಳ್ಳಿ ಗ್ರಾಮ ಪಂಚಾಯತಿ ಆವರಣದಿಂದ, ಕಾರಟಗಿಯ ಕನಕದಾಸ ವೃತ್ತ, ಹಳೆ ಬಸ್ ನಿಲ್ದಾಣದ ಮಾರ್ಗವಾಗಿ ಎಪಿಎಂಸಿ ವರಗೆ ನಡೆಯಿತು.
ದಾರಿಯುದ್ದಕ್ಕೂ ಮತದಾನದ ಜಾಗೃತಿ ಗೀತೆಗಳ ಪ್ರಚುರ ಪಡಿಸುವ ಮೂಲಕ ಕೈಯಲ್ಲಿ ಮತದಾರರ ಜಾಗೃತಿ ಫಲಕಗಳನ್ನು ಪ್ರದರ್ಶಿಸಿ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಐಇಸಿ ಸಂಯೋಜಕರು, ಗ್ರಾಮ ಪಂಚಾಯತಿ ಮಟ್ಟದ ಪುನರ್ವಸತಿ ಕಾರ್ಯಕರ್ತರು, ವಿಶೇಷಚೇತನರು, ಸೇರಿ ಗ್ರಾ.ಪಂ ಸಿಬ್ಬಂದಿಗಳು ಇದ್ದರು.