
ಬೆಂಗಳೂರು: ಮಾಜಿ ಸಿಎಂ ಜಗದೀಶ ಶೆಟ್ಟರ್, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಪಕ್ಷದ ಹಿರಿಯ ನಾಯಕರು, ಅಪಾರ ಸೇವೆ ಸಲ್ಲಿಸಿದವರು. ಅನುಭವಿಗಳು ಆಗಿರುವ ಕಾರಣ ಬೇರೆ ರಾಜ್ಯಗಳಿಗೆ ಅವರ ಸೇವೆಯನ್ನು ವರಿಷ್ಠರು ಬಳಸಬಹುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಭವಿಷ್ಯ ನುಡಿದರು.
ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ದೆಹಲಿಗೆ ತೆರಳಿರುವ ಶೆಟ್ಟರ್ ವರಿಷ್ಠರ ಜತೆಗೆ ಮಾತುಕತೆ ನಡೆಸಲಿದ್ದು, ನಂತರ ಪರಿಸ್ಥಿತಿ ತಿಳಿಯಾಗುವ ವಿಶ್ವಾಸವಿದೆ.
ಪಕ್ಷ ಗೆಲ್ಲುವ, ಅಧಿಕಾರಕ್ಕೆ ಬರುವ ಸಾಧ್ಯತೆಗಳಿರುವ ಬಂಡಾಯ, ಅಸಮಾಧಾನ ಸಹಜ. ಎಲ್ಲರೊಂದಿಗೆ ಮಾತುಕತೆ ನಡೆಸಿ ಬಗೆಹರಿಸಿತ್ತೇವೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು. ಚುನಾವಣೆಯಲ್ಲಿ ಸೋತ ನಂತರವೂ ಡಿಸಿಎಂ ಮಾಡಿ, ಎರಡು ಬಾರಿ ಎಂಎಲ್ಸಿ ಮಾಡಲಾಗಿದೆ. ಮಹಾರಾಷ್ಟ್ರ ಉಸ್ತುವಾರಿಯನ್ನು ನೀಡಲಾಗಿತ್ತು ಎಂಬುದನ್ನು ಮರೆಯಬಾರದು ಎಂದರು.
ಕನಕಪುರ ಹಾಗೂ ವರುಣಾ ಕ್ಷೇತ್ರಕ್ಕೆ ಆರ್.ಅಶೋಕ್, ವಿ.ಸೋಮಣ್ಣ ಅವರನ್ನು ಸ್ಪರ್ಧೆಗೆ ಇಳಿಸುವ ಮೂಲಕ ಪ್ರಬಲ ಪೈಪೋಟಿಗೆ ಸಿದ್ಧ, ಹೊಂದಾಣಿಕೆ ರಾಜಕಾರಣಕ್ಕೆ ಅವಕಾಶವಿಲ್ಲವೆಂಬ ಸ್ಪಷ್ಟ ಸಂದೇಶವನ್ನು ಬಿಜೆಪಿ ರವಾನಿಸಿದೆ ಎಂದು ಸಿ.ಟಿ.ರವಿ ಹೇಳಿದರು.