ತಹಸೀಲ್ದಾರ, ತಾಪಂ ಇಓ, ಜಿಲ್ಲಾಮಟ್ಟದ ಅಧಿಕಾರಿಗಳಿಗೆ ವಿಶೇಷ ಸೂಚನೆ

ಯಾವುದೇ ಊರಿನಲ್ಲಿ ಕುಡಿವ ನೀರಿಗೆ ತೊಂದರೆ ಬಾರದಿರಲಿ

ಕೊಪ್ಪಳ ಮಾರ್ಚ್ 31: ಬೇಸಿಗೆ ಹಿನ್ನೆಲೆಯಲ್ಲಿ ಜನ- ಜಾನುವಾರುಗಳಿಗೆ ಯಾವುದೇ ರೀತಿಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದ ಹಾಗೆ ಕಾರ್ಯಯೋಜನೆ ರೂಪಿಸಿ ಕಾರ್ಯಗತಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಹೇಳಿದರು.

ಬೇಸಿಗೆ ಹಿನ್ನೆಲೆಯಲ್ಲಿ, ಮಾರ್ಚ 31ರಂದು ಜಿಲ್ಲಾ ಅಧಿಕಾರಿಗಳ‌ ಕಚೇರಿ ಸಭಾಂಗಣದಲ್ಲಿ ಎಲ್ಲ ತಾಲೂಕುಗಳ ತಹಸೀಲ್ದಾರರು, ತಾಪಂ ಕಾರ್ಯ ನಿರ್ವಾಹಣಾಧಿಕಾರಿಗಳು ಮತ್ತು  ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ಮಾತನಾಡಿದ

ಅವರು  ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಿ ಜನತೆಗೆ ಸ್ಪಂದನೆ ನೀಡದಿದ್ದಲ್ಲಿ ಜನತೆಗೆ ತಪ್ಪು ಸಂದೇಶ ರವಾನೆಯಾಗಿ ಜಿಲ್ಲಾಡಳಿತಕ್ಕೆ ಕೆಟ್ಟ ಹೆಸರು ಬರುತ್ತದೆ.‌ ಹೀಗಾಗಿ ಜನತೆಗೆ ಕುಡಿವ ನೀರು ಕೊಡುವ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದಲ್ಲಿ ಅಂತಹ ಅಧಿಕಾರಿಗಳ‌ ಮೇಲೆ  ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿ ಕುಡಿವ ನೀರಿನ ತೊಂದರೆ ಇರುವ ಬಗ್ಗೆ ಬರುವ ಪತ್ರಿಕಾ ವರದಿಗಳಿಗಳನ್ನು ಸಹ ಆಧರಿಸಿ ಅದಕ್ಕೆ ತುರ್ತು ಸ್ಪಂದನೆ ನೀಡಬೇಕು. ಕುಡಿವ ನೀರಿನ ಬಗ್ಗೆ ದೂರುಗಳು ಬರದ ಹಾಗೆ ಆಯಾ ತಾಲೂಕಿನ  ತಹಸೀಲ್ದಾರರು ಮತ್ತು ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು ವಿಶೇಷ ಗಮನ ಹರಿಸಿ, ನೀರಿನ ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ತಮ್ಮ ತಮ್ಮ ಹಂತದಲ್ಲಿ
ಗ್ರಾಮವಾರು ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದರು.

ಸಣ್ಣಪುಟ್ಟ ದುರಸ್ತಿ ಇರುವುದನ್ನು ವಾರದೊಳಗೆ ಸರಿಪಡಿಸಿ ಎಲ್ಲ ಶುದ್ಧ ಕುಡಿವ ನೀರಿನ ಘಟಕಗಳು ಸಮರ್ಪಕ ಕಾರ್ಯನಿರ್ವಹಿಸುವಂತೆ ಗಮನ ಹರಿಸಬೇಕು ಎಂದು  ಗ್ರಾಮೀಣ ಕುಡಿವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಗಡುವು ವಿದಿಸಿದರು.
ಬೇಸಿಗೆಯ ಧಗೆ ಹೆಚ್ಚುತ್ತಿದೆ.‌ ಹೀಗಾಗಿ ಇನ್ನು ಯಾವ ಯಾವ ಹಳ್ಳಿಗಳಲ್ಲಿ ಕುಡಿವ ನೀರಿಗೆ ಸಮಸ್ಯೆ ಬರಬಹುದು ಎಂಬುದರ ಬಗ್ಗೆ ಪಟ್ಟಿ ಮಾಡಿ, ಆಯಾ ಕಡೆಗಳಲ್ಲಿನ ನೀರಿನ ಸಮಸ್ಯೆಯನ್ನು ಹೇಗೆ ನಿಬಾಯಿಸಬಹುದು ಎಂಬುದರ ಬಗ್ಗೆ ಯೋಜನೆ ರೂಪಿಸಲು ಸೂಚಿಸಿದರು.

ಜಿಲ್ಲೆಯ ಪ್ರತಿ ಹಳ್ಳಿಹಳ್ಳಿಗಳಲ್ಲಿ ಸಹ ನೀರಿನ ಮೂಲ ಇರುವುದನ್ನು ಖಚಿತಪಡಿಸಿಕೊಂಡು ಮುಂಜಾಗ್ರತೆ ವಹಿಸಬೇಕು. ಲಭ್ಯತೆ ಇರುವ ಕಡೆಗಳಲ್ಲಿ ವಾಟರ್ ಟ್ಯಾಂಕನ್ನು ಭರ್ತಿ ಮಾಡಲು ಕ್ರಮ ವಹಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ನಗರ ಪ್ರದೇಶಗಳಲ್ಲಿನ  ಬೋರವೆಲ್ಲಗಳಲ್ಲಿ ಈಗ ಇರುವ  ನೀರಿನ ಪ್ರಮಾಣ ಎಷ್ಟು? ಎಷ್ಟು ದಿನಗಳಿಗೆ ನೀರು ಲಭ್ಯವಾಗಬಹುದು? ಎಂಬುದರ ಬಗ್ಗೆ ಈಗಿನಿಂದಲೇ ಪರಿಶೀಲಿಸಿ ಜಾಗೃತೆ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು, ಆಯಾ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಸಹ  ಸೂಚಿಸಿದರು.


ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ರತ್ನಂ ಪಾಂಡೆಯ ಅವರು ಮಾತನಾಡಿ, ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಎಲ್ಲ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿ ಕ್ರಮ ವಹಿಸಬೇಕು ಎಂದು ಸಭೆಯಲ್ಲಿದ್ದ ಆಯಾ ತಾಲೂಕಿನ ತಾಪಂ ಇಓಗಳಿಗೆ ಸೂಚನೆ ನೀಡಿದರು.


ಜಿಲ್ಲೆಯಲ್ಲಿ ಜಾನುವಾರುಗಳಿಗೆ ಸಾಕಾಗುವಷ್ಟು ಮೇವು ಲಭ್ಯತೆ ಇದೆ ಎಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.


ಸಭೆಯಲ್ಲಿ ಸಹಾಯಕ ಆಯುಕ್ತರಾದ ಬಸವಣ್ಣೆಪ್ಪ ಕಲಶೆಟ್ಟಿ, ಜಿಪಂ ಉಪ ಕಾರ್ಯದರ್ಶಿ ಸಮೀರ್ ಮುಲ್ಲಾ, ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಗಂಗಾವತಿ, ಕಾರಟಗಿ, ಕುಕನೂರ, ಕನಕಗಿರಿ ತಾಲೂಕುಗಳ ತಹಸೀಲ್ದಾರರು, ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

error: Content is protected !!