ಬೆಂಗಳೂರು: ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷವು ರಾಜ್ಯದ ವಿವಿಧ ಕಡೆಗಳಲ್ಲಿ ಗಲಭೆ ಎಬ್ಬಿಸಲು ಪ್ರಯತ್ನಿಸುತ್ತಿದ್ದು, ಅದರ ಮೇಲೆ ಕಣ್ಣಿಟ್ಟು, ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ದೂರು ನೀಡಲು ಕಾವಲು ಸಮಿತಿ ರಚನೆ ಮಾಡಲಾಗುವುದು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕಾರಿಪುರ ಮತ್ತು ಇತರ ಕಡೆಗಳಲ್ಲಿ ಹಿಂಸಾಚಾರಕ್ಕೆ ಕಾಂಗ್ರೆಸ್‌ ಪಕ್ಷದ ಪಿತೂರಿಯೇ ಕಾರಣವಾಗಿದೆ ಎಂದು ಅವರು ದೂರಿದರು.

‘ನಮ್ಮ ಸರ್ಕಾರ ಯಾವುದೇ ಜಾತಿಗೂ ಅನ್ಯಾಯ ಮಾಡಿಲ್ಲ. ಸದಾಶಿವ ಆಯೋಗ ಶಿಫಾರಸು ಮಾಡಿದ್ದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಮೀಸಲಾತಿ ನೀಡಲಾಗಿದೆ. ಬಂಜಾರ, ಕೊರಮ, ಕೊರಚ ಸಮುದಾಯಕ್ಕೆ ಸದಾಶಿವ ಆಯೋಗ ಶೇ 3 ಶಿಫಾರಸು ಮಾಡಿತ್ತು, ಬೊಮ್ಮಾಯಿ ಅವರು ಶೇ 4.5 ರಷ್ಟು ಮೀಸಲು ನೀಡಿದ್ದಾರೆ. ಇದನ್ನು ಸಹಿಸದ ಕಾಂಗ್ರೆಸ್‌ ಗಲಭೆ ಸೃಷ್ಟಿಸುತ್ತಿದೆ’ ಎಂದು ತಿಳಿಸಿದರು.

ಪ್ರತಿ 10 ವರ್ಷಗಳಿಗೊಮ್ಮೆ ಮೀಸಲಾತಿ ಪರಾಮರ್ಶೆ ಮಾಡಬೇಕು ಎಂದು ಡಾ.ಅಂಬೇಡ್ಕರ್‌ ಅವರೇ ಹೇಳಿದ್ದರು. ಆದರೆ, ಕಾಂಗ್ರೆಸ್‌ ಪಕ್ಷ ತನ್ನ ಅಧಿಕಾರದ ಅವಧಿಯಲ್ಲಿ ಯಾವತ್ತೂ ಪರಾಮರ್ಶೆ ನಡೆಸಿರಲಿಲ್ಲ. ಬಸವರಾಜ ಬೊಮ್ಮಾಯಿ ಮೀಸಲಾತಿ ಪರಾಮರ್ಶೆ ನಡೆಸಿ, ಜನಸಂಖ್ಯೆಗೆ ಅನುಗುಣವಾಗಿ ಪರಿಷ್ಕರಣೆ ಮಾಡಿದ್ದಾರೆ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಅವರು ಲಿಂಗಾಯತರನ್ನು ಒಡೆಯಲು ಮುಂದಾದರು. ಈಗ ನಾವು ಲಿಂಗಾಯತರಿಗೆ ಶೇ 7ರಷ್ಟು ಮೀಸಲಾತಿ ಕೊಟ್ಟಿದ್ದು, ಆ ಸಮಾಜ ಖುಷಿಯಿಂದಿದೆ. ಒಕ್ಕಲಿಗರಿಗೆ ಶೇ 6ರಷ್ಟು ಮೀಸಲಾತಿ ನೀಡಿದ್ದು, ಎರಡೂ ಸಮಾಜಗಳು ಸಂತಸದಿಂದಿವೆ ಎಂದರು.

error: Content is protected !!