
ಕನಕಗಿರಿ: ಜಿಲ್ಲೆಯ ಕನಕಗಿರಿ ತಾಲ್ಲೂಕಿನ ರೈಸ್ ಟೆಕ್ನಾಲಜಿ ಪಾರ್ಕ್ ಕಚೇರಿ ಆವರಣದಲ್ಲಿ ಭಾನುವಾರ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಬಂದಿದ್ದ ವೇಳೆ ಶಾಸಕ ಬಸವರಾಜ ದಢೇಸೂಗೂರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ.
ಕಾಂಗ್ರೆಸ್ ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷ ಬಸವರಾಜ ತಳವಾರ ಹಾಗೂ ಇತರರು ಶಾಸಕರನ್ನು ತರಾಟೆಗೆ ತೆಗೆದುಕೊಂಡ ವಿಡಿಯೊ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.
‘ಸೋಮನಾಳ-ನವಲಿ ರೈಸ್ ಟೆಕ್ನಾಲಜಿ ಪಾರ್ಕ್‌ನಲ್ಲಿ ₹128 ಕೋಟಿಯಲ್ಲಿ ಮಳಿಗೆಗಳು, ಗೋದಾಮು, ಕಾಂಕ್ರಿಟ್ ರಸ್ತೆ ಹಾಗೂ ಆಡಳಿತ ಕಚೇರಿ ಸೇರಿದಂತೆ ವಿವಿಧ ಕಾಮಗಾರಿಗಳು ಅಪೂರ್ಣಗೊಂಡಿವೆ. ಆದರೂ ಇವುಗಳನ್ನು ಉದ್ಘಾಟನೆ ಮಾಡುತ್ತಿರುವುದು ಏಕೆ’ ಎಂದು ಬಸವರಾಜ ಖಾರವಾಗಿ ಪ್ರಶ್ನಿಸಿದ್ದಾರೆ.
‘ಉದ್ಘಾಟನೆಯನ್ನು ತರಾತುರಿಯಲ್ಲಿ ಏಕೆ ಮಾಡುತ್ತಿದ್ದೀರಿ? ಇತರೆ ಜನಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಯಾಕೆ ಆಹ್ವಾನಿಸಿಲ್ಲ? ಗುತ್ತಿಗೆದಾರರು ಹಾಗೂ ಶಾಸಕರು ಮಾತ್ರ ಬಂದರೆ ಸಾಕೇ? ಎಂದು ಪ್ರಶ್ನಿಸಿದ್ದಾರೆ. ತಳವಾರ ಪ್ರಶ್ನೆಗೆ ಉತ್ತರಿಸಿರುವ ದಢೇಸೂಗೂರು ‘ಲೋಪವಾಗಿದ್ದರೆ ಅಧಿಕಾರಿಗಳಿಗೆ ಕೇಳಿ ಉದ್ಘಾಟನೆಗೆ ಅಡ್ಡಿ ಪಡಿಸಬೇಡಿ’ ಎಂದಿದ್ದಾರೆ.
ಮಾತಿನ ಚಕಮಕಿ ನಡುವೆಯೂ ಕಾಮಗಾರಿಗಳಿಗೆ ತರಾತುರಿಯಲ್ಲಿ ಚಾಲನೆ ಕೊಟ್ಟರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರೇಶ ಸಮಗಂಡಿ, ಪ್ರಮುಖರಾದ ನಾಗರಾಜ ಬಿಲ್ಗಾರ, ಬಸವರಾಜ ಮೇಲುಗಿರಿಯಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಈ ಕುರಿತು ‘ಕಾಲಚಕ್ರ ‘ಗೆ ಪ್ರತಿಕ್ರಿಯಿಸಿದ ದಢೇಸೂಗೂರು ‘ರೈಸ್ ಟೆಕ್ನಾಲಜಿ ಪಾರ್ಕ್ ಅಭಿವೃದ್ಧಿಗೆ ಅನುದಾನ ತಂದಿದ್ದು ನಾನೇ. ಮಾಜಿ ಸಚಿವರು ತಮ್ಮ ಕಾರ್ಯಕರ್ತರನ್ನು ಮುಂದೆ ಬಿಟ್ಟು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಾರೆ’ ಎಂದು ಶಿವರಾಜ ತಂಗಡಗಿ ಹೆಸರು ಹೇಳದೆ ಆರೋಪಿಸಿದರು.