ಕೋಪ್ಪಳ: ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜನರಿಗೆ ಹಂಚಲು ಸೀರೆಗಳನ್ನು ಸಂಗ್ರಹಿಸಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ತಾಲ್ಲೂಕಿನ ಬೇವೂರು ಪೊಲೀಸ್ ಠಾಣೆಯಲ್ಲಿ ಬಸವರಾಜ ಕಾಡಾಪೂರ ಎಂಬುವರ ಮೇಲೆ ಎಫ್‌ಐಆರ್ ದಾಖಲಾಗಿದೆ.
ಮನೆಯಲ್ಲಿ ಸೀರೆಗಳನ್ನು ಸಂಗ್ರಹಿಸಿಡಲಾಗಿದೆ ಎಂಬ ದೂರಿನ ಮೇರೆಗೆ ವಿಧಾನಸಭಾ ಕ್ಷೇತ್ರದ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿಗಳು ಹಿರೇವಡ್ರಕಲ್ಲು ಗ್ರಾಮದ ಬಸವರಾಜ ಕಾಡಾಪೂರ ಮನೆಗೆ ತೆರಳಿ ಪರಿಶೀಲಿಸಿದಾಗ ಶೆಡ್‌ನಲ್ಲಿ ಸೀರೆಯ ಐದು ಬಂಡಲ್‌ಗಳು ಪತ್ತೆಯಾಗಿದ್ದವು. ಪ್ರತಿ ಸೀರೆಯ ಬೆಲೆ ₹75ರಂತೆ ಒಟ್ಟು ₹54,750 ಮೌಲ್ಯದ 730 ಸೀರೆಗಳನ್ನು ಪತ್ತೆ ಮಾಡಲಾಗಿದೆ ಎಂದು ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಕಾವ್ಯಾರಾಣಿ ತಿಳಿಸಿದ್ದಾರೆ.
ಕೇಸರಿ ಹಾಗೂ ಕೆಂಪು ಬಣ್ಣಗಳ ಬಟ್ಟೆಯ ಕವರ್ ಮೇಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವ, ಕ್ಷೇತ್ರದ ಶಾಸಕ ಹಾಲಪ್ಪ ಆಚಾರ್ ಭಾವಚಿತ್ರ ಹಾಗೂ ಗೌರಾ ಎಂದು ಹೆಸರು ಬರೆಯಲಾಗಿದೆ.
‘ಗೌರಾ ಗ್ರಾನೈಟ್ ವತಿಯಿಂದ ಮಹಿಳಾ ಸ್ವಸಹಾಯ ಗುಂಪಿನ ಮಹಿಳೆಯರಿಗೆ ಸೀರೆಗಳನ್ನು ವಿತರಿಸಲು ಸಂಗ್ರಹಿಸಿಟ್ಟಿರುವುದಾಗಿ ಹಾಗೂ ಸಂಜೆಯ ವೇಳೆಗೆ ಎಲ್ಲಾ ಮಹಿಳೆಯರಿಗೆ ಹಂಚಲು ಉದ್ದೇಶಿಸಿರುವುದಾಗಿ ಬಸವರಾಜ ಲಿಖಿತ ಹೇಳಿಕೆ ನೀಡಿದ್ದಾರೆ’ ಎಂದು ಹೇಳಿದ್ದಾರೆ.