ಬೆಂಗಳೂರು: ಮತದಾರರಿಗೆ ಅಮಿಷವೊಡ್ಡುವುದನ್ನು ತಡೆಯಲು ಚುನಾವಣಾ ದಿನಾಂಕ ಘೋಷಣೆಯಾಗುವವರೆಗೆ ಕಾಯದೆ ತಕ್ಷಣದಿಂದಲೇ ಕ್ರಮ ಜರುಗಿಸಲಾಗುವುದು. ಈ ಸಂಬಂಧಪಟ್ಟಎಲ್ಲಾ ಅಧಿಕಾರಿಗಳಿಗೆ ಸ್ಪಷ್ಟವಾದ ನಿರ್ದೇಶನ ನೀಡಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಹೇಳಿದ್ದಾರೆ.

ಶನಿವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ವೇಳೆ ಒಡ್ಡುವ ಅಮಿಷ ಮತ್ತು ಹಣದ ಬಳಕೆಯನ್ನು ತಡೆಯುವುದು ದೊಡ್ಡ ಸವಾಲಾಗಿದೆ. ಅಮಿಷವೊಡ್ಡುವುದು ಮತ್ತು ಹಣದ ಬಳಕೆ ನಿಯಂತ್ರಣಕ್ಕಾಗಿ ನೀತಿ ಸಂಹಿತೆ ಜಾರಿಯಾಗುವವರೆಗೆ ಕಾಯುವ ಅಗತ್ಯ ಇಲ್ಲ. ಚುನಾವಣೆಗೆ ನಿಯೋಜನೆಗೊಂಡಿರುವ ತನಿಖಾ ಅಧಿಕಾರಿಗಳು ತಕ್ಷಣದಿಂದಲೇ ಕಾರ್ಯಪ್ರವೃತ್ತರಾಗಬಹುದು ಎಂದು ತಿಳಿಸಿದರು.

ಕುಕ್ಕರ್‌, ಸೀರೆಯಂತಹ ಗೃಹೋಪಯೋಗಿ ವಸ್ತುಗಳ ಸಗಟು ಖರೀದಿ ಮೇಲೆ ನಿಗಾವಹಿಸಲಾಗುತ್ತಿದೆ. ಹಿಂದೆಂದಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ಖರೀದಿ ನಡೆದರೆ ಅಂತಹವುಗಳ ಮೇಲೆ ನಿಗಾ ವಹಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಆಯೋಗ ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ಯಾವುದೇ ಅಧಿಕಾರಿಗಳ ಪಕ್ಷಪಾತ ಮಾಡುತ್ತಿರುವ ಬಗ್ಗೆ ದೂರುಗಳು ಬಂದರೆ ಅವುಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುತ್ತದೆ ಎಂದರು.

ರಾಜ್ಯ ಪ್ರವಾಸದಲ್ಲಿ ಪಡೆದುಕೊಂಡಿರುವ ಮಾಹಿತಿಯ ಆಧಾರದ ಮೇಲೆ ಕರ್ನಾಟಕದಲ್ಲಿ ಎಷ್ಟುಹಂತದಲ್ಲಿ ಚುನಾವಣೆ ನಡೆಸಬಹುದು ಎಂಬ ಬಗ್ಗೆ ದೆಹಲಿಯಲ್ಲಿ ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಎಟಿಎಂಗೆ ಹಣ ತುಂಬಿಸಲು ಸಂಜೆ 5ರವರೆಗಷ್ಟೇ ಅವಕಾಶ

ಬ್ಯಾಂಕ್‌ ಖಾತೆ ಮತ್ತು ಎಟಿಎಂಗೆ ಹಣ ತುಂಬಿಸುವ ವಾಹನಗಳು ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಮಾತ್ರ ಸಂಚರಿಸಲು ಅವಕಾಶ ಕಲ್ಪಿಸಲಾಗುವುದು. ಸಂಜೆ 5ರಿಂದ ಬೆಳಗ್ಗೆ 10ರವರೆಗೆ ನಿರ್ಬಂಧ ವಿಧಿಸಲಾಗುವುದು. ದೊಡ್ಡಮಟ್ಟದಲ್ಲಿ ಹಣ ವರ್ಗಾವಣೆಯಾಗುವ ಖಾತೆಗಳ ಮೇಲೆ ನಿಗಾವಹಿಸುವಂತೆ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ ಮುಖ್ಯ ಚುನಾವಣಾ ಆಯುಕ್ತರು ತಿಳಿಸಿದರು.

ಚುನಾವಣಾ ಅಕ್ರಮ ಬಗ್ಗೆ ನೀವೂ ದೂರು ನೀಡಿ

ಚುನಾವಣಾ ವೇಳೆ ಹಣ ಪ್ರಭಾವವನ್ನು ಬಳಸಿ ನಡೆಸಲಾಗುವ ಚುನಾವಣಾ ಅಕ್ರಮಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಹಲವಾರು ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಲಿವೆ. ಸಿ ವಿಜಿಲ್‌ ಆಯಪ್‌ ಮೂಲಕ ಜನ ಸಾಮಾನ್ಯರು ಚುನಾವಣಾ ಅಕ್ರಮಗಳನ್ನು ಅನಾಮಧೇಯವಾಗಿ ದೂರು ನೀಡಬಹುದಾಗಿದೆ ಎಂದು ಆಯುಕ್ತರು ಹೇಳಿದರು.

‘ಬಿಜೆಪಿ ರಾಜ್ಯಗಳ ಇವಿಎಂ ಬೇಡ’ ಬೇಡಿಕೆ ತಿರಸ್ಕಾರ

ಗುಜರಾತ್‌ ಸೇರಿ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಬಳಕೆಯಾಗಿರುವ ಇವಿಎಂಗಳನ್ನು ಉಪಯೋಗಿಸಬಾರದು ಎಂಬ ಕಾಂಗ್ರೆಸ್‌ ಆಗ್ರಹವನ್ನು ತಳ್ಳಿ ಹಾಕಿದ ರಾಜೀವ್‌ ಕುಮಾರ್‌, ಗುಜರಾತ್‌ನಿಂದ ಕಾರು ರಾಜ್ಯಕ್ಕೆ ಬರುವುದಿಲ್ಲವೇ? ಅವುಗಳನ್ನು ಹಲವು ಬಾರಿ ಪರೀಕ್ಷಿಸಿಯೇ ರಾಜ್ಯದಲ್ಲಿ ಬಳಕೆ ಮಾಡಲಾಗುತ್ತದೆ ಅಲ್ಲವೇ? ಹಾಗೆಯೇ ಇವಿಎಂಗಳನ್ನು ರಾಜಕೀಯ ನಾಯಕರ ಸಮ್ಮುಖದಲ್ಲಿಯೇ ಪರೀಕ್ಷೆ ನಡೆಸಲಾಗುತ್ತದೆ ಎಂದರು.

ಇವಿಎಂ ಬಗ್ಗೆ ಶಂಕೆ: ಕಾಂಗ್ರೆಸ್‌ ಆರೋಪ ತಳ್ಳಿ ಹಾಕಿದ ಆಯೋಗ

ಬೆಂಗಳೂರು: ಇವಿಎಂಗಳನ್ನು ಯಾವುದೇ ಕಡೆ ಅಥವಾ ಯಾರಿಂದಲೂ ದುರುಪಯೋಗ ಮಾಡಲು ಸಾಧ್ಯವಿಲ್ಲ. ಅವುಗಳನ್ನು ಬದಲಾವಣೆ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಸ್ಪಷ್ಟಪಡಿಸಿದರು. ಇಂತಹ ಪ್ರಶ್ನೆ ಹಲವು ಬಾರಿ ಆಯೋಗದ ಮುಂದಿದೆ. ಯಾವುದೇ ಕಾರಣಕ್ಕೂ ದುರುಪಯೋಗವಾಗಲು ಸಾಧ್ಯವಿಲ್ಲ ಎಂದು ಹೇಳಿದರು.

ಪ್ರತಿ ಚುನಾವಣೆಯು ಆಯೋಗಕ್ಕೆ ಅಗ್ನಿ ಪರೀಕ್ಷೆ ಇದ್ದಂತೆ. ಇತ್ತೀಚೆಗೆ ನಡೆದ ಮೇಘಾಲಯ, ತ್ರಿಪುರ ಚುನಾವಣೆಯಲ್ಲಿಯೂ ಹಲವು ಸವಾಲುಗಳು ಎದುರಾಗಿದ್ದು, ಯಶಸ್ವಿಯಾಗಿ ಎದುರಿಸಿ ನ್ಯಾಯ ಸಮ್ಮತ ಮತ್ತು ಮುಕ್ತ ಚುನಾವಣೆ ನಡೆಸಿದ್ದೇವೆ. ಅದೇ ರೀತಿ ಕರ್ನಾಟಕದಲ್ಲಿಯೂ ನಡೆಸುತ್ತೇವೆ ಎಂದರು.

ಬ್ಯಾಂಕ್‌ಗಳಿಗೂ ತಮ್ಮದೇ ಆದ ರೀತಿಯಲ್ಲಿ ಗಮನಹರಿಸುವಂತೆ ತಿಳಿಸಲಾಗಿದೆ. ಅನುಮಾನಾಸ್ಪದ ಖಾತೆಗಳು ಕಂಡು ಬಂದರೆ ತಕ್ಷಣ ಸಂಬಂಧಪಟ್ಟತನಿಖಾ ಏಜೆನ್ಸಿಗಳಿಗೆ ಮಾಹಿತಿ ನೀಡುವಂತೆ ನಿರ್ದೇಶನ ನೀಡಲಾಗಿದೆ. ಅಲ್ಲದೇ, ಯುಪಿಐ ಪಾವತಿಗಳ ಮೇಲೂ ನಿಗಾವಹಿಸಲಾಗುತ್ತದೆ. ಆಯೋಗದ ಸಾಮಾಜಿಕ ಜಾಲತಾಣ ತಂಡವೊಂದು ಇವುಗಳ ಮೇಲೆ ಎಚ್ಚರಿಕೆ ವಹಿಸಿ ಕಾರ್ಯನಿರ್ವಹಿಸಲಿದೆ ಎಂದು ಮಾಹಿತಿ ನೀಡಿದರು.

error: Content is protected !!