
ರಾಜ್ಯದಲ್ಲಿ ಕೋಟ್ಯಂತರ ಜನರ ಹಸಿವು ನೀಗಿಸುವ ಜನಪ್ರಿಯ ‘ಅನ್ನಭಾಗ್ಯ’ ಯೋಜನೆಗೆ ಹಲವು ಮಾರ್ಗಗಳಲ್ಲಿ ನಿರಂತರವಾಗಿ ಬೀಳುತ್ತಿರುವ ಅಕ್ರಮಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದ್ದು, ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಎಸ್ಟಿಕ್ಯೂಸಿ ಸರ್ಟಿಪೈಡ್ ‘ಐರಿಸ್ ಸ್ಕಾಯನರ್ ಹಾಗೂ ಧ್ವನಿ ಮುದ್ರಿತ ತೂಕದ ಯಂತ್ರ’ ಅಳವಡಿಸುವಂತೆ ಆದೇಶಿಸಿದೆ.
ರಾಜ್ಯದಲ್ಲಿ 1,17,13,413 ಬಿಪಿಎಲ್, 24,04,127 ಎಪಿಎಲ್ ಹಾಗೂ 10,90,594 ಅಂತ್ಯೋದಯ ಸೇರಿ ಒಟ್ಟು 1,52,08,134 ಕಾರ್ಡ್ಗಳಿವೆ. ಪ್ರತಿ ತಿಂಗಳು 20,168 ನ್ಯಾಯಬೆಲೆ ಅಂಗಡಿಗಳಿಂದ ಯೋಜನೆಯಡಿ ಕಾರ್ಡ್ದಾರರಿಗೆ ಪಡಿತರ ವಿತರಿಸಲಾಗುತ್ತಿದೆ. ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಮಾಲೀಕರು, ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದ ಮುಖ್ಯಸ್ಥರೊಬ್ಬರ ಬಯೋಮೆಟ್ರಿಕ್ನಲ್ಲಿ ಬೆರಳಚ್ಚು ಪಡೆದು ಆಧಾರ್ ಒಟಿಪಿ ಮೂಲಕ ರೇಷನ್ ಹಂಚಿಕೆ ಮಾಡಲಾಗುತ್ತದೆ. ಆದರೆ, ಕೆಲ ಸಂದರ್ಭದಲ್ಲಿ ಅನ್ನಭಾಗ್ಯ ಯೋಜನೆಗೆ ಪದೇಪದೆ ಸರ್ವರ್ ಭೂತ ಕಾಡುತ್ತಿದೆ. ಇದರಿಂದ ಪಡಿತರ ಪಡೆಯಲು ಕಾರ್ಡ್ದಾರರು ಪರದಾಡುತ್ತಿದ್ದಾರೆ. ಕೆಲವೊಮ್ಮೆ ಸರ್ವರ್ ಸಮಸ್ಯೆ ಇದ್ದಾಗ ದೈನಂದಿನ ಕೆಲಸ ಬಿಟ್ಟು ಕಾರ್ಡ್ದಾರರು ಬಯೋ ನೀಡಲು ಪ್ರತಿ ನಿತ್ಯ ನ್ಯಾಯಬೆಲೆ ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲಬೇಕಿದೆ. ಒಟ್ಟಿನಲ್ಲಿ ರೇಷನ್ ಪಡೆಯಲು ಒಂದು ರೀತಿಯಲ್ಲಿ ಹರಸಾಹಸ ಪಡುವಂತಾಗಿದೆ. ಹಾಗಾಗಿ, ಈ ಸಮಸ್ಯೆ ಹೋಗಲಾಡಿಸಲು ಪಡಿತರ ಚೀಟಿದಾರರಿಗೆ ಓಟಿಪಿ ಮೂಲಕ ರೇಷನ್ ವಿತರಿಸುವ ಪ್ರಕ್ರಿಯೆ ಸ್ಥಗಿತಗೊಳ್ಳಿಸಲಾಗಿದೆ. ಹಾಗಾಗಿ, ನ್ಯಾಯಬೆಲೆ ಅಂಗಡಿಗಳ ಮಾಲೀಕರು ಇನ್ಮುಂದೆ ಐರಿಸ್ ಸ್ಕಾಯನರ್ ಮತ್ತು ಧ್ವನಿ ಮುದ್ರಿತ ತೂಕದ ಯಂತ್ರ ಮೂಲಕ ರೇಷನ್ ವಿತರಿಸುವಂತೆ ಇಲಾಖೆ ಆದೇಶದಲ್ಲಿ ಉಲ್ಲೇಖಿಸಿದೆ.
ಪಡಿತರ ವಿತರಕ ಸಂಘ ವಿರೋಧ: ನ್ಯಾಯಬೆಲೆ ಅಂಗಡಿಗಳಲ್ಲಿ ‘ಐರಿಸ್ ಸ್ಕಾಯನರ್ ಹಾಗೂ ಧ್ವನಿ ಮುದ್ರಿತ ತೂಕದ ಯಂತ್ರ’ ಅಳವಡಿಕೆಗೆ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಬಲವಾಗಿ ವಿರೋಧಿಸುತ್ತಿದೆ. ಆಗಾಗ್ಗೆ ಕಾಡುವ ಸರ್ವರ್ ಸಮಸ್ಯೆ ಬಗೆಹರಿಸಿ ಹಿಂದೆ ಇರುವ ಆಧಾರ್ ಓಟಿಪಿ ಮಾದರಿಯಲ್ಲಿ ಪಡಿತರ ವಿತರಿಸಲು ಅವಕಾಶ ನೀಡಬೇಕು. ಇದರಲ್ಲಿ ತೂಕದಲ್ಲಿ ವ್ಯತ್ಯಾಸ ಆಗುವುದಿಲ್ಲ. ಫಲಾನುಭವಿಗಳಿಗೆ ಅಕ್ಕಿ ವಿತರಣೆಗೆ ಸರ್ಕಾರ ಕ್ವಿಂಟಾಲ್ಗೆ 120 ರೂ. ಕಮಿಷನ್ ನೀಡುತ್ತಿದೆ. ಬೇರೆ ರಾಜ್ಯದಲ್ಲಿ ಕ್ವಿಂಟಾಲ್ 250 ರೂ. ವರೆಗೆ ಮಾಲೀಕರಿಗೆ ಸಿಗುತ್ತಿದೆ. ಆದರೆ, ನಮ್ಮ ರಾಜ್ಯದಲ್ಲಿ ಕಡಿಮೆ ಕಮಿಷನ್ ಕೊಡಲಾಗುತ್ತಿದೆ. ಈ ಹಣದಲ್ಲಿ ಜೀವನ ಸಾಗಿಸಲು ನಮಗೆ ಕಷ್ಟವಾಗುತ್ತಿದೆ. ಹೀಗಿರುವಾಗ ‘ಐರಿಸ್ ಸ್ಕಾಯನರ್ ಹಾಗೂ ಧ್ವನಿ ಮುದ್ರಿತ ತೂಕದ ಯಂತ್ರ’ ಅಳವಡಿಕೆಗೆ ಕನಿಷ್ಠ 10 ಸಾವಿರ ರೂ. ಖರ್ಚು ಆಗುತ್ತದೆ. ಸಗಟು ಮಳಿಗೆಗಳಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಹೆಚ್ಚಾಗಿ ಅನ್ನಭಾಗ್ಯ ಯೋಜನೆಗೆ ಕನ್ನ ಹಾಕುತ್ತಿದ್ದಾರೆ. ಮೊದಲ ಎಲ್ಲ ಸಗಟು ಮಳಿಗೆಗಳಲ್ಲಿ ಎಲೆಕ್ಟ್ರಾನಿಕ್ ಆಧಾರಿತ ತೂಕದ ಯಂತ್ರ ಅಳವಡಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಂಡರೆ ಯೋಜನೆಯಲ್ಲಿ ನಡೆಯುವ ಅಕ್ರಮಕ್ಕೆ ಕಡಿವಾಣ ಬೀಳಲಿದೆ ಎನ್ನುತ್ತಾರೆ ಸಂಘ ಅಧ್ಯಕ್ಷ ಟಿ.ಕೃಷ್ಣಪ್ಪ.
ರಾಜ್ಯದ ಪ್ರತಿ ನ್ಯಾಯಬೆಲೆ ಅಂಗಡಿ ಮಾಲೀಕರು ಐರಿಸ್ ಸ್ಕಾಯನರ್ ಅಳವಡಿಸಬೇಕು. ಈ ಮೂಲಕ ಕಾರ್ಡ್ದಾರರ ಕಣ್ಣು ಸೆರೆ ಹಿಡಿದು ನಮೂದಿಸಿಕೊಳ್ಳಬೇಕು. ಅಲ್ಲದೆ, ತೂಕದ ಯಂತ್ರದಲ್ಲಿ ಧ್ವನಿ ಮುದ್ರಿತ ಪೆಟ್ಟಿಗೆ ಸ್ಥಾಪಿಸಬೇಕು. ಹಿಂದೆ ಕಾರ್ಡ್ದಾರರಿಗೆ 6 ಕೆಜಿ ಅಕ್ಕಿ ನೀಡುವಾಗ ಕೆಲ ಮಾಲೀಕರು ಐದೂವರೆ ಕೆಜಿ ತೂಕ ಮಾಡಿ ವಿತರಿಸುತ್ತಿದ್ದರು. ಇದರಲ್ಲಿ ಅರ್ಧ ಕೆಜಿ ಅಥವಾ ಕಡಿಮೆ ಪ್ರಮಾಣದಲ್ಲಿ ಅಕ್ಕಿ ವಿತರಿಸಲಾಗುತ್ತಿತ್ತು. ಹಾಗಾಗಿ, ಧ್ವನಿ ಮುದ್ರಿತ ತೂಕದ ಯಂತ್ರ ಮೂಲಕ ಅಕ್ಕಿ ವಿತರಿಸಿದರೆ ಅಕ್ರಮಕ್ಕೆ ಕಡಿವಾಣ ಬೀಳಲಿದೆ. ಅಕ್ಕಿ ತೂಕ ಕಡಿಮೆ ಇದ್ದರೆ ಈ ಯಂತ್ರ ಕೂಗುತ್ತದೆ. ಹಾಗಾಗಿ, ಅಂಗಡಿ ಮಾಲೀಕರು ಕಾರ್ಡ್ದಾರರಿಗೆ ತೂಕದಲ್ಲಿ ಮೋಸ ಮಾಡುವುದಕ್ಕೆ ಸಾಧ್ಯವಿಲ್ಲ. ಒಂದು ವೇಳೆ ಕಡಿಮೆ ಮೋಸ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಸುಲಭವಾಗಲಿದೆ.