
ಬೆಂಗಳೂರು :, ಫೆಬ್ರವರಿ 07; ಕರ್ನಾಟಕ ಸರ್ಕಾರ ಚುನಾವಣೆಗೆ ಕೆಲವೇ ದಿನಗಳು ಇರುವಾಗಲೇ ಐಎಎಸ್ ಅಧಿಕಾರಿಗಳ ವರ್ಗಾವಣೆ ನಡೆಸುತ್ತಿದೆ.
ರಾಜ್ಯದಲ್ಲಿ ಏಪ್ರಿಲ್ ಅಥವ ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯುವ ನಿರೀಕ್ಷೆ ಇದೆ.
ಸೋಮವಾರ ಕರ್ನಾಟಕ ಸರ್ಕಾರ ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ. ಫೌಜಿಯಾ ತರುನ್ನುಮ್ ಸೇರಿದಂತೆ ಇಬ್ಬರು ಐಎಎಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿದೆ.
ಬಿ. ಫೌಜಿಯಾ ತರುನ್ನುಮ್ ಈ ಹಿಂದೆ ಕಲಬುರಗಿ ನಗರ ಪಾಲಿಕೆ ಆಯುಕ್ತರಾಗಿದ್ದರು. ಬಳಿಕ ಅವರನ್ನು ಕೊಪ್ಪಳ ಜಿಲ್ಲಾ ಪಂಚಾಯಿತಿ ಸಿಇಓ ಆಗಿ ವರ್ಗಾವಣೆ ಮಾಡಲಾಗಿತ್ತು. ಈಗ ಚುನಾವಣೆ ಹತ್ತಿರವಾಗುತ್ತಿರುವಾಗ ಮತ್ತೆ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಐಎಎಸ್ (ಕೆಎನ್ 2015) ಬಿ. ಫೌಜಿಯಾ ತರುನ್ನುಮ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪರೀಕ್ಷಾ ನಿಯಂತ್ರಕರು, ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು ನೇಮಕ ಮಾಡಲಾಗಿದೆ. ಈ ಹುದ್ದೆಯಲ್ಲಿದ್ದ ಬನ್ವರ್ ಸಿಂಗ್ ಮೀನಾರನ್ನು ವರ್ಗಾವಣೆ ಮಾಡಲಾಗಿದೆ.
ಐಎಎಸ್ (ಕೆಎನ್ 2017) ಬನ್ವರ್ ಸಿಂಗ್ ಮೀನಾ ಪರೀಕ್ಷಾ ನಿಯಂತ್ರಕರು, ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪರೀಕ್ಷಾ ಜಂಟಿ ನಿಯಂತ್ರಕರು ಕರ್ನಾಟಕ ಲೋಕಸೇವಾ ಆಯೋಗ ಆಗಿ ನೇಮಿಸಲಾಗಿದೆ.
ಐಎಎಸ್ (ಕೆಎನ್ 2018) ರಾಹುಲ್ ರತ್ನಂ ಪಾಂಡೆ ಜನರಲ್ ಮ್ಯಾನೇಜರ್, ರಿಸೆಟಲ್‌ಮೆಂಟ್ & ರಿಹ್ಯಾಬ್ಲಿಟೇಷನ್ ಮತ್ತು ಭೂ ಸ್ವಾಧೀನ, ಕೃಷ್ಣಾ ಮೇಲ್ದಂಡೆ ಯೋಜನೆ, ಬಾಗಲಕೋಟೆ ಇವರನ್ನು ಕೊಪ್ಪಳ ಜಿಲ್ಲಾ ಪಂಚಾಯಿತಿ ಸಿಒಒ ಆಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ.
ವರ್ಗಾವಣೆಗೆ ತಡೆ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದೆ. ಈ ಹಿನ್ನಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ವರ್ಗಾವಣೆ ಪ್ರಕ್ರಿಯೆ ತಡೆ ಹಿಡಿಯುವಂತೆ ರಾಜ್ಯ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆದಿದೆ. ಅದರಲ್ಲೂ ಚುನಾವಣಾ ಕಾರ್ಯದಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡದಂತೆ ಸೂಚನೆ ನೀಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಚೇರಿಯಿಂದಲೂ ಜನವರಿ ಅಂತ್ಯಕ್ಕೆ ಟಿಪ್ಪಣಿಯೊಂದನ್ನು ಹೊರಡಿಸಲಾಗಿತ್ತು. ವಿವಿಧ ಇಲಾಖೆಗಳ ವರ್ಗಾವಣೆ ಪ್ರಸ್ತಾವನೆ ಕಡತಗಳನ್ನು ಸಲ್ಲಿಕೆ ಮಾಡದಂತೆ ಹಲವು ಇಲಾಖೆಗಳಿಗೆ ಸೂಚನೆ ನೀಡಲಾಗಿತ್ತು.