
ಕೊಪ್ಪಳ : ಗಂಗಾವತಿ ನಗರದ 27ನೇ ವಾರ್ಡಿನಲ್ಲಿ ಅಲೆಮಾರಿ ಜನಾಂಗಗಳಾದ ಬುಡ್ಗಜಂಗಮ, ಸಿಂಧೊಳ್ಳಿ, ಚೆನ್ನದಾಸರು, ಶಿಳ್ಳೆಕ್ಯಾತರು ಸುಮಾರು 50 ವರ್ಷಗಳಿಂದ ವಾಸ ಮಾಡುತ್ತಿದ್ದು, ಇವರು ವಾಸ ಮಾಡಲು ಯೋಗ್ಯವಿಲ್ಲದ ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದು, ಮಳೆಯಿಂದ, ಚಳಿಯಿಂದ ಅನೇಕ ಮಕ್ಕಳು, ವೃದ್ಧರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಚಿಕ್ಕ ಸ್ಥಳದ ಒಂದೇ ಗುಡಿಸಲಿನಲ್ಲಿ ನಾಲ್ಕೈದು ಕುಟುಂಬಗಳು ವಾಸ ಮಾಡುತ್ತಿವೆ. ಇವರು ಯಾವುದೆ ಉದ್ಯೋಗವಿಲ್ಲದೇ, ಕಸ ಆರಿಸುವುದು, ಚಿಂದಿ ಆರಿಸುವುದು, ಭಿಕ್ಷೆ ಬೇಡುವ ಕಾಯಕದಲ್ಲಿ ತೊಡಗಿರುತ್ತಾರೆ. ಇವರು ಪರಿಶಿಷ್ಟ ಜಾತಿಗೆ ಒಳಪಟ್ಟಿದ್ದರೂ ವಸತಿ ಯೋಜನೆಯಲ್ಲಿ ಇವರಿಗೆ ಯಾವುದೇ ಗೃಹ ನಿರ್ಮಾಣ ಮಾಡಿರುವುದಿಲ್ಲ.
ಕೂಡಲೇ ಇವರಿಗೆ ಸೂರು ಕಲ್ಪಿಸಲು ಒತ್ತಾಯಿಸಿ ಎಂದು ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷರಾದ ಬಸವರಾಜ ಮ್ಯಾಗಳಮನಿ ಶಾಸಕರಾದ ಮಾನ್ಯ ಪರಣ್ಣ ಮುನವಳ್ಳಿ, ತಾಲೂಕ ಸಮಾಜ ಕಲ್ಯಾಣಾಧಿಕಾರಿಗಳಿಗೆ ಹಾಗೂ ನಗರಸಭೆಯ ಪೌರಾಯುಕ್ತರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.


ಈ ಸಂದರ್ಭದಲ್ಲಿ ಬಸವರಾಜ ಮ್ಯಾಗಳಮನಿ ಮಾತನಾಡಿ, ಮಾನ್ಯ ಶಾಸಕರು, ಮಾನ್ಯ ತಾಲೂಕ ಸಮಾಜ ಕಲ್ಯಾಣಾಧಿಕಾರಿಗಳು, ಮಾನ್ಯ ಪೌರಾಯುಕ್ತರು ಈಗಾಗಲೇ ಭೇಟಿ ನೀಡಿ, ಪರಿಶೀಲನೆ ಮಾಡಿದ್ದು ತಿಳಿದುಬಂದಿದೆ. ಆದರೂ ಇದುವರೆಗೂ ಇವರಿಗೆ ಸೂರು ಕಲ್ಪಿಸಿರುವುದಿಲ್ಲ. ಸೂರು ಕಲ್ಪಿಸದೇ ಇರುವುದಕ್ಕೆ ಇಲ್ಲಿನ ಜನಾಂಗವು ವಿಧಾನಸಭೆಯ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ. ಖುದ್ದು ನಾನು ಆ ಪ್ರದೇಶಕ್ಕೆ ಭೇಟಿ ನೀಡಿದಾಗ ಈ ಎಲ್ಲಾ ಮಾಹಿತಿಗಳು ತಿಳಿದುಬಂದಿರುತ್ತವೆ. ಈ ಮತದಾನ ಬಹಿಷ್ಕರಿಸಲು ಅವಕಾಶ ನೀಡದೇ, ಇವರಿಗೆ ಶೀಘ್ರದಲ್ಲಿ ಇದೇ ಫೆಬ್ರವರಿ ತಿಂಗಳಲ್ಲಿಯೇ ಸೂಕ್ತ ಗೃಹಭಾಗ್ಯ ಯೋಜನೆಯಡಿಯಲ್ಲಿ ಸೂರು ಕಲ್ಪಿಸಬೇಕು. ಮುಂದಿನ ದಿನಗಳಲ್ಲಿ ಚುನಾವಣೆ ನೀತಿಸಂಹಿತೆ ಜಾರಿಯಾಗುವುದರಿಂದ ಕೂಡಲೇ ಶಾಸಕರು ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ವಸತಿರಹಿತರಿಗೆ ಸೂರು ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ, ಮುಂಬರುವ ಮಾರ್ಚ್ ತಿಂಗಳಲ್ಲಿ ಈ ಜನಾಂಗದವರೊಂದಿಗೆ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು, ತಾಲೂಕ ಸಮಾಜಕಲ್ಯಾಣಾಧಿಕಾರಿಗಳು ಹಾಗೂ ಪೌರಾಯುಕ್ತರು ಕೂಡಲೇ ಸ್ಥಳ ಪರಿಶೀಲನೆ ಮಾಡಿ, ಶೀಘ್ರದಲ್ಲಿಯೇ ತಮ್ಮ ಬೇಡಿಕೆಗಳನ್ನು ಈಡೇರಿಸಲಾಗುವುದೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೃಷ್ಣ ಬುಡ್ಗಜಂಗಮ, ಪಿ. ಯಲ್ಲಪ್ಪ ಸಿಂಧೊಳ್ಳಿ, ಮಂಜುನಾಥ ಚೆನ್ನದಾಸರ್, ಹೆಚ್.ಸಿ ಹಂಚಿನಾಳ, ಜಡಿಯಪ್ಪ, ದೇವಪ್ಪ ಕರಡಿ, ರಮೇಶ, ಪಂಪಾಪತಿ, ಶಿವಶಾಂತ, ಬಿಸ್ಮಿಲ್ಲಾಖಾನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.