ಕನಕಗಿರಿ: ಹೊಲದಲ್ಲಿಯ ಬೆಳೆ ತಿಂದಿದೆ ಎಂದು ಆರೋಪಿಸಿ ದನ ಮನೆ ಮುಂದೆ ಕಟ್ಟಿ ಹಾಕಿ, ಅದನ್ನು ಬಿಡಿಸಿಕೊಳ್ಳಲು ಬಂದ ಮಹಿಳೆಯ ಮೇಲೆ ವ್ಯಕ್ತಿಯೊಬ್ಬರೂ ಹಲ್ಲೆ ನಡೆಸಿದ ಘಟನೆ ಸಮೀಪದ ರಾಂಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಪರಿಶಿಷ್ಟ ಜಾತಿಯ ಶೋಭಾ ಅವರಿಗೆ ಸೇರಿದ ದನ ಗುರುವಾರ ರಾತ್ರಿ ಗ್ರಾಮದ ಅಮರೇಶ ಕುಂಬಾರ ಅವರ ಹೊಲದಲ್ಲಿದ್ದ ಬೆಳೆ ತಿಂದು ಹಾಕಿತ್ತು.
ತಮ್ಮ ಹೊಲದ ಬೆಳೆಯನ್ನು ಹಾಳು ಮಾಡಿದ ದನವನ್ನು ಅಮರೇಶ ಅವರು ಮನೆ ಮುಂದೆ ಕಟ್ಟಿ ಹಾಕಿದ್ದಾರೆ.
ಶುಕ್ರವಾರ ಬೆಳಿಗ್ಗೆ ಅಮರೇಶ ಅವರ ಮನೆಗೆ ಬಂದ ಮಹಿಳೆ ದನ ಬಿಟ್ಟು ಬಿಡಿ ಎಂದು ಅಂಗಲಾಚಿದ್ದಾರೆ. ಆಕ್ರೋಶಗೊಂಡ ಅಮರೇಶ ಅವರು ಮಹಿಳೆ ಮೇಲೆ ಹಲ್ಲೆ ಮಾಡಿ ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾರೆ.
ಮಹಿಳೆ ನೀಡಿದ ದೂರಿನ ಅನ್ವಯ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಅಮರೇಶ ಕುಂಬಾರ ವಿರುದ್ಧ ಜಾತಿ ನಿಂದನೆ ಹಾಗೂ ಹಲ್ಲೆ ಪ್ರಕರಣ ದಾಖಲಾಗಿದೆ.
ಅಮರೇಶ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿಐ ಜಗದೀಶ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.