
ಕೊಪ್ಪಳ: ಭತ್ತದ ಕಣದ ಎಂದೇ ಹೆಸರಾದ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರ ಈಗ ಈಡೀ ರಾಜ್ಯದ ಗಮನ ಸೆಳೆದಿದೆ. ಹಿಂದಿನ ಹಲವು ಚುನಾವಣೆಗಳಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ನಡುವಿನ ಪೈಪೋಟಿಯಿಂದ ಗಮನ ಸೆಳೆದಿದ್ದ ಕ್ಷೇತ್ರದಲ್ಲಿ ಜನಾರ್ದನ ರೆಡ್ಡಿ ಆಗಮನದಿಂದ ಈ ಬಾರಿ ಹಳೇ ಅಭ್ಯರ್ಥಿಗಳಿಗೆ ಹೊಸ ಸವಾಲು ಎದುರಾಗಿದೆ.
ಹಾಲಿ ಶಾಸಕ ಪರಣ್ಣ ಮುನವಳ್ಳಿ ಮೂರನೇ ಬಾರಿಗೆ ಆಯ್ಕೆ ಬಯಸಿದ್ದಾರೆ. ಈ ಬಾರಿಯೂ ನಾನೇ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ. ಪರಣ್ಣ 2008 ಮತ್ತು 2018ರ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದರು. ಎಚ್.ಆರ್. ಚನ್ನಕೇಶವ ಟಿಕೆಟ್ ಗಿಟ್ಟಿಸಲು ಈ ಸಲ ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ. ಶಿಕ್ಷಣ ಕೇಂದ್ರಗಳ ಮೂಲಕ ಹೆಸರು ಮಾಡಿರುವ ನೆಕ್ಕಂಟಿ ಸೂರಿಬಾಬು ಹೆಸರು ಕೂಡ ಚಾಲ್ತಿಯಲ್ಲಿದೆ. ರೆಡ್ಡಿ ಆಗಮನಕ್ಕೂ ಮುನ್ನ ಬಿಜೆಪಿ ಟಿಕೆಟ್ ಪಡೆಯಲು ಓಡಾಡಿದ್ದ ವಿರೂಪಾಕ್ಷಪ್ಪ ಸಿಂಗನಾಳ ಬಳಿಕ ಸುಮ್ಮನಾಗಿದ್ದಾರೆ.
ಮೂರು ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ಎರಡು ಬಾರಿ ಶಾಸಕರಾಗಿರುವ ಇಕ್ಬಾಲ್ ಅನ್ಸಾರಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದು 7,973 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಈ ಬಾರಿಯೂ ಟಿಕೆಟ್ ನೀಡುವಂತೆ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಜೆಡಿಎಸ್ ತೊರೆದು ಇತ್ತೀಚೆಗೆ ಪಕ್ಷ ಸೇರಿರುವ ಎಚ್.ಆರ್. ಶ್ರೀನಾಥ್ ಕೂಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಟಿಕೆಟ್‌ಗಾಗಿ ಈ ಮೂವರ ನಡುವೆ ಪೈಪೋಟಿ ನಡೆಯುತ್ತಿದೆ.
ಚುನಾವಣಾ ಸಮಯದಲ್ಲಿ ಈ ಮೂವರು ನಾಯಕರ ನಡುವಿನ ಭಿನ್ನಾಭಿಪ್ರಾಯ ಪಕ್ಷದ ಮೇಲಾಗುವ ಸಾಧ್ಯತೆಯಿದೆ. ಯಾಕೆಂದರೆ ಪಕ್ಷದ ಕಾರ್ಯಕ್ರಮಗಳನ್ನು ಮಲ್ಲಿಕಾರ್ಜುನ ನಾಗಪ್ಪ ಮತ್ತು ಶ್ರೀನಾಥ್ ಒಂದು ಕಡೆ, ಅನ್ಸಾರಿ ಇನ್ನೊಂದು ಕಡೆ ನಡೆಸುತ್ತಾರೆ. ಟಿಕೆಟ್ ಕುರಿತು ಇತ್ತೀಚೆಗೆ ಕೊಪ್ಪಳದಲ್ಲಿ ನಡೆದಿದ್ದ ಸಭೆಯಲ್ಲಿಯೂ ಇವರ ನಡುವಿನ ಭಿನ್ನಮತ ಬಹಿರಂಗವಾಗಿತ್ತು. ಆದ್ದರಿಂದ ಕಾಂಗ್ರೆಸ್ ಪಾಲಿಗೆ ತಮ್ಮದೇ ಪಕ್ಷದ ನಾಯಕರು ಬಿಸಿತುಪ್ಪವಾಗುವ ಆತಂಕವಂತೂ ಇದ್ದೇ ಇದೆ.
ಗಂಗಾವತಿ ಕ್ಷೇತ್ರದಲ್ಲಿ ಲಿಂಗಾಯತ ಹಾಗೂ ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕುರುಬ ಸಮುದಾಯದ ಜನ ಕೂಡ ಮಹತ್ವದ ಪಾತ್ರ ವಹಿಸಲಿದ್ದಾರೆ.
ಅನ್ಸಾರಿ ಜೆಡಿಎಸ್ ತೊರೆದ ಬಳಿಕ ಕ್ಷೇತ್ರದಲ್ಲಿ ಪಕ್ಷದ ಶಕ್ತಿ ಕುಂದಿದೆ. ಕಣಕ್ಕಿಳಿಯುವುದಾಗಿ ಪಾಡಗುತ್ತಿ ಅಕ್ತರ್‌ಸಾಬ್ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯಲು ಮಾಜಿ ಸಚಿವ ಜನಾರ್ದನ ರೆಡ್ಡಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಮನೆ ಖರೀದಿಸಿ ಗಂಗಾವತಿಯಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ರೆಡ್ಡಿ ವಿವಿಧ ಸಮಾಜಗಳ ಪ್ರಮುಖರನ್ನು, ಗ್ರಾಮ ಪಂಚಾಯಿತಿಗಳ ಸದಸ್ಯರನ್ನು ತಮ್ಮ ಪಕ್ಷಕ್ಕೆ ಸೆಳೆದು ನಿತ್ಯ ಎಸೆಯುತ್ತಿರುವ ‘ಬೌನ್ಸರ್’ ಸವಾಲುಗಳಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ಚುನಾವಣೆಯಲ್ಲಿ ಹೇಗೆ ಪ್ರತ್ಯುತ್ತರ ನೀಡಲಿವೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಗಂಗಾವತಿ ಕ್ಷೇತ್ರದ ಹಿನ್ನೋಟ
ಕೊಪ್ಪಳ: ಗಂಗಾವತಿ ಕ್ಷೇತ್ರ 1957ರಿಂದ 1978ರ ಅವಧಿಯಲ್ಲಿ ನಡೆದ ಚುನಾವಣೆ ಹಾಗೂ ಉಪಚುನಾವಣೆಗಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಿಡಿತ ಸಾಧಿಸಿತ್ತು. 1983ರಲ್ಲಿ ಎಚ್.ಎಸ್. ಮುರಳೀಧರ (ಪಕ್ಷೇತರ) ಮತ್ತು 1985ರಲ್ಲಿ ಜನತಾ ಪಕ್ಷದಿಂದ ಗೌಳಿ ಮಹಾದೇವಪ್ಪ ಗೆಲ್ಲುವ ಮೂಲಕ ಕಾಂಗ್ರೆಸ್ ಓಟಕ್ಕೆ ಕಡಿವಾಣ ಹಾಕಿದ್ದರು. 1989ರಿಂದ 1999ರ ಅವಧಿಯಲ್ಲಿ ನಡೆದ ಮೂರು ಚುನಾವಣೆಗಳಲ್ಲಿಯೂ ಕಾಂಗ್ರೆಸ್‌ನಿಂದ ಶ್ರೀರಂಗದೇವರಾಯಲು ಹ್ಯಾಟ್ರಿಕ್ ಗೆಲುವು ಸಾಧಿಸಿ ಪಕ್ಷದ ಕೋಟೆ ಭದ್ರಗೊಳಿಸಿದ್ದರು.
2004 ಹಾಗೂ 2013ರಲ್ಲಿ ಜೆಡಿಎಸ್‌ನಿಂದ ಇಕ್ಬಾಲ್ ಅನ್ಸಾರಿ, 2008 ಮತ್ತು 2018ರಲ್ಲಿ ಪರಣ್ಣ ಮನವಳ್ಳಿ ಬಿಜೆಪಿಯಿಂದ ಜಯ ಪಡೆದಿದ್ದರು.