ಕೊಪ್ಪಳ ಫೆಬ್ರವರಿ 03 (ಕರ್ನಾಟಕ ವಾರ್ತೆ): ಕಲಕಬಂಡಿ ಗ್ರಾಮದ ಆರೋಪಿ ಈಶಪ್ಪ ತಂದೆ ಶಂಕ್ರಪ್ಪ ಮುದಿಗೌಡ್ರ ಇತನು ಮಹಿಳೆಯ ಕೊಲೆ ಮಾಡಿದ ಆರೋಪ ಸಾಭಿತಾಗಿದ್ದರಿಂದ ಗೌರವಾನ್ವಿತ ಕೊಪ್ಪಳ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಈ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 5 ಸಾವಿರ ರೂ.ಗಳ ದಂಡ ವಿಧಿಸಿದ್ದಾರೆ.
ಪ್ರಕರಣ ಏನು:? ಯಲಬುರ್ಗಾ ಪೋಲಿಸ್ ಠಾಣೆ ವ್ಯಾಪ್ತಿಯ ಕಲಕಬಂಡಿ ಗ್ರಾಮದ ನಿವಾಸಿ ಮುತ್ತವ್ವ ಈಕೆಯು ಈಗ್ಗೆ ಸುಮಾರು ಎರಡುವರೆ ವರ್ಷಗಳಿಂದ ಈಶಪ್ಪ ನರಿ ತಂದೆ ಶಂಕ್ರಪ್ಪ ಮುದೇಗೌಡ್ರ ಈತನೊಂದಿಗೆ ಸಂಬಂಧವನ್ನಿಟ್ಟುಕೊಂಡು ಬಂದಿದ್ದು, ಆದರೆ ಮೃತ ಮುತ್ತವ್ವಳು ಈಗ್ಗೆ 03 ತಿಂಗಳಿನಿಂದ ಆರೋಪಿತನೊಂದಿಗೆ ತನ್ನ ಸಂಬಂಧವನ್ನು ಬಿಟ್ಟಿದ್ದರಿಂದ ಆರೋಪಿತನು ಮೃತ ಮುತ್ತವ್ವಳ ಮೇಲೆ ದ್ವೇಷ ಇಟ್ಟುಕೊಂಡು ಹೇಗಾದರೂ ಮಾಡಿ ಕೊಲೆ ಮಾಡುವ ಉದ್ದೇಶದಿಂದ ಮುತ್ತವಳನ್ನು ಹಿಂಬಾಲಿಸಿ ಮಚ್ಚಿನಿಂದ ಬಲಕುತ್ತಿಗೆ ಜೋರಾಗಿ ಹೊಡೆದು ಕೊಲೆ ಮಾಡಿದ ಕಾರಣ 2023ರ ಜನವರಿ 31 ರಂದು ಯಲಬುರ್ಗಾ ಪೋಲಿಸ್ ಠಾಣಾ ಗುನ್ನೆ ನಂ: 98/2016 ಕಲಂ: 302, ಐಪಿಸಿ ರಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಅಂದಿನ ತನಿಖಾಧಿಕಾರಿಯಾದ ಪಿ.ಐ ನಾಗರಾಜ ಕಮ್ಮಾರ ಅವರು ತನಿಖೆ ಮಾಡಿ ಆರೋಪಿಯ ಮೇಲೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದು, ಎಸ್.ಸಿ ಸಂ: 03/2017 ರಲ್ಲಿ ದಾಖಲಾಗಿ ವಿಚಾರಣೆ ನಡೆಸಲಾಗಿದೆ.
ಪ್ರಕರಣದಲ್ಲಿ ಕಲಕಬಂಡಿ ಗ್ರಾಮದ ಆರೋಪಿ ಈಶಪ್ಪ ತಂದೆ ಶಂಕ್ರಪ್ಪ ಮುದಿಗೌಡ್ರ ಇತನ ಮೇಲಿರುವ ಆರೋಪಗಳು ಸಾಭೀತಾಗಿವೆ ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಬಿ.ಎಸ್ ರೇಖಾ ಅವರು 2023ರ ಜನವರಿ 31 ರಂದು ಆರೋಪಿಗೆ ಜೀವಾವಧಿ ಜೈಲು ಶಿಕ್ಷೆ ಹಾಗೂ ರೂ. 5,000 ಗಳ ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ನಾಗರಾಜ ಆಚಾರ್, ಅಂಬಣ್ಣ ಟಿ ಮತ್ತು ಸರ್ಕಾರಿ ಅಭಿಯೋಜಕರಾದ ಬಂಡಿ ಅಪರ್ಣಾ ಎಂ ಅವರು ಸರ್ಕಾರದ ಪರವಾಗಿ ಪ್ರಕರಣ ನಡೆಸಿರುತ್ತಾರೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ಪ್ರಧಾನ ಸರ್ಕಾರಿ ಅಭಿಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.