
ಬೀದರ್: ಮಹಾರಾಷ್ಟ್ರ ಹಾಗೂ ತೆಲಂಗಾಣಕ್ಕೆ ಗಡಿ ಹಂಚಿಕೊಂಡಿರುವ ಬೀದರ್ ಜಿಲ್ಲೆಯಲ್ಲಿ ಸರ್ವ ಧರ್ಮೀಯ ಪವಿತ್ರ ಧಾರ್ಮಿಕ ಕ್ಷೇತ್ರಗಳು, ಕೋಟೆಗಳು ಹಾಗೂ ಐತಿಹಾಸಿಕ ಸ್ಮಾರಕಗಳು ಇರುವ ಕಾರಣ ಕೇಂದ್ರ ಸರ್ಕಾರ ಹೈದರಾಬಾದ್, ಬೀದರ್ ಹಾಗೂ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಗಳನ್ನೊಳಗೊಂಡು ಪ್ರವಾಸೋದ್ಯಮ ಕಾರಿಡಾರ್ ನಿರ್ಮಿಸುವ ಯೋಜನೆಗೆ ಈ ಬಾರಿಯ ಬಜೆಟ್‌ನಲ್ಲೂ ಆದ್ಯತೆ ದೊರೆಯಲಿಲ್ಲ.
ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳು ಇದ್ದರೂ ಪ್ರವಾಸಿಗರಿಗೆ ಮೂಲಸೌಕರ್ಯ ಒದಗಿಸುವ ದಿಸೆಯಲ್ಲಿ ಹೆಜ್ಜೆ ಇಡದೇ ಇರುವುದು ಜಿಲ್ಲೆಯ ಪ್ರವಾಸೋದ್ಯಮ ಹಿಂದುಳಿಯಲು ಕಾರಣವಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ಬೀದರ್ ಜಿಲ್ಲೆಯನ್ನು ಧಾರವಾಡ ವೃತ್ತದಿಂದ ಹಂಪಿ ವೃತ್ತಕ್ಕೆ ಸೇರಿಸಿದೆ. ಅದಕ್ಕೆ ಪೂರಕವಾಗಿ ಕೇಂದ್ರದಿಂದ ಅಗತ್ಯ ನೆರವು ಸಿಗದಿರುವುದು ಹಾಗೂ ಬಜೆಟ್‌ನಲ್ಲಿ ಒಂದೇ ಒಂದು ಯೋಜನೆ ಪ್ರಕಟಿಸದಿರುವುದು ಜಿಲ್ಲೆಯ ಜನರಲ್ಲಿ ನಿರಾಶೆ ಮೂಡಿಸಿದೆ.


ಬೀದರ್ ದಕ್ಷಿಣ ಭಾರತದಲ್ಲೇ ವಿಶಿಷ್ಟವಾದ ಜಿಲ್ಲೆಯಾಗಿದೆ. ಬಹುಭಾಷಿಕ ಹಾಗೂ ಬಹು ಸಂಸ್ಕೃತಿಯ ನಾಡಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ವಾತಾವರಣ ಇದ್ದರೂ ಕೇಂದ್ರ ಸರ್ಕಾರ ಬೀದರ್ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ.
ಕೈಗಾರಿಕೋದ್ಯಮ ಆರಂಭಿಸಲು ಸಹ ಆಸಕ್ತಿ ತೋರಿಸಿಲ್ಲ. ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಜಿಲ್ಲೆಯವರೇ ಆಗಿರುವ ಕಾರಣ ವಿಶೇಷ ಕೊಡುಗೆಗಳು ಜಿಲ್ಲೆಗೆ ದೊರೆಯಲಿವೆ ಎಂದು ಜನ ನಿರೀಕ್ಷಿಸಿದ್ದರು. ಆದರೆ, ಜನರ ನಿರೀಕ್ಷೆ ಹುಸಿಯಾಗಿದೆ.
ಹೈದರಾಬಾದ್, ಬೀದರ್, ಸೋಲಾಪುರ ಸೇರಿಸಿಕೊಂಡು ಪ್ರವಾಸೋದ್ಯಮ ಕಾರಿಡಾರ್ ನಿರ್ಮಾಣ ಮಾಡಬೇಕು ಎನ್ನುವ ಬಹು ದಿನಗಳ ಬೇಡಿಕೆ ಈ ವರ್ಷವೂ ಕನಸಾಗಿಯೇ ಉಳಿಯಿತು.
ಕೇಂದ್ರ ಸರ್ಕಾರ ಉತ್ತರ ಭಾರತದಲ್ಲಿ ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಕೊಟ್ಟಿದೆ. ಬೀದರ್ ಜಿಲ್ಲೆಯನ್ನು ಕೇಂದ್ರವಾಗಿಟ್ಟುಕೊಂಡು ಹೊಸ ಯೋಜನೆ ಪ್ರಕಟಿಸಿದ್ದರೆ ಕರ್ನಾಟಕ, ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳಿಗೆ ಅನುಕೂಲವಾಗುತ್ತಿತ್ತು ಎಂದು ಸಾಮಾಜಿಕ ಕಾರ್ಯಕರ್ತ ಬಸವರಾಜ ಭತಮುರ್ಗೆ ಹೇಳುತ್ತಾರೆ.
‘ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಪ್ರವಾಸೋದ್ಯಮ ಕಾರಿಡಾರ್ ನಿರ್ಮಿಸಿದ್ದರೆ ಜಿಲ್ಲೆಯ ಜನ ಹೈದರಾಬಾದ್‌ನಂತಹ ದೊಡ್ಡ ಮಹಾನಗರಗಳಿಗೆ ವಲಸೆ ಹೋಗುವುದು ತಪ್ಪುತ್ತಿತ್ತು.
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳು ಬೀದರ್ ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡಿರುವುದು ಖಂಡನೀಯ’ ಎಂದು ಜೆಡಿಎಸ್‌ನ ಮುಖಂಡ ನಬಿ ಖುರೇಶಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.