ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ಕಾಯ್ದೆ; ನಿರೀಕ್ಷಕರುಗಳಿಗೆ ತರಬೇತಿ ಕಾರ್ಯಕ್ರಮ



ಕೊಪ್ಪಳ: ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಸಮಾಜದಲ್ಲಿ ಕಾನೂನು ಅರಿವು ಅಗತ್ಯವಾಗಿದೆ ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್ ರೇಖಾ ಅವರು ಹೇಳಿದರು.

ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಯುನಿಸೆಫ್-ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನೆ ಇವರ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್ ಜೆ.ಹೆಚ್ ಪಟೇಲ್ ಸಭಾಂಗಣದಲ್ಲಿ ಜನವರಿ 31 ರಂದು ಹಮ್ಮಿಕೊಂಡಿದ್ದ “ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ-1956, ತಿದ್ದುಪಡಿ ಕಾಯ್ದೆ-2016”ರ ಕುರಿತು ಕಲಂ 16 ಮತ್ತು 17 ರಡಿ ನೇಮಕಗೊಂಡ ನಿರೀಕ್ಷಕರುಗಳಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಶ್ರೇಯೋಭಿವೃದ್ಧಿಯಾಗಬೇಕಾದರೆ ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆ ಅತ್ಯವಶ್ಯಕವಾಗಿದೆ. ಯಾವುದೇ ಕ್ಷೇತ್ರಗಳಲ್ಲಿ ಕೆಲಸಕ್ಕಾಗಿ ಮಕ್ಕಳನ್ನು ದುಡಿಮೆಗೆ ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಳ್ಳುವ ಹಾಗೂ ದುಡಿಮೆಗಾಗಿ ಬಿಡುವಂತಹ ವ್ಯವಸ್ಥೆಗಳು ನಿಲ್ಲಬೇಕು. ಮಕ್ಕಳಿಗೆ ಬಾಲ್ಯಾವಸ್ಥೆಯನ್ನು ಸೂಕ್ತವಾಗಿ ನೀಡುವುದು ನಮ್ಮಲ್ಲರ ಕರ್ತವ್ಯವಾಗಿದೆ. ಮಕ್ಕಳು ದುಡಿಯುವುದರಿಂದ ಬಡತನ ನಿರ್ಮೂಲನೆಯಾಗುವುದಿಲ್ಲ ಎಂಬುವುದರ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಬೇಕು. ಮಕ್ಕಳು ಅವರ ತಂದೆ-ತಾಯಿ ಅಥವಾ ಪೋಷಕರ ರಕ್ಷಣೆಯಲ್ಲಿರುವಂತೆ ನೋಡಿಕೊಳ್ಳಬೇಕು. ಕುಟುಂಬ ವ್ಯವಸ್ಥೆ, ಉತ್ತಮ ಸಮಾಜದಲ್ಲಿ ಮಕ್ಕಳು ಬದುಕಬೇಕು. ಮಕ್ಕಳಿಗಾಗಿ ಉತ್ತಮ ಹಾಗೂ ಕಡ್ಡಾಯ ಶಿಕ್ಷಣ ಹೀಗೆ ಹಲವಾರು ಹಕ್ಕುಗಳಿದ್ದು, ಇವುಗಳ ಜಾಗೃತಿ ಜೊತೆಗೆ ಪಾಲನೆ ಅತ್ಯವಶ್ಯಕವಾಗಿದೆ. ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ-1956, ತಿದ್ದುಪಡಿ ಕಾಯ್ದೆ-2016 ಅಡಿಯಲ್ಲಿ 14 ವರ್ಷದೊಳಗಿನ ಮಕ್ಕಳು ಯಾವುದೇ ಉದ್ಯೋಗದಲ್ಲಿ ಅಥವಾ ಪ್ರಕ್ರಿಯೆಗಳಲ್ಲಿ ಮತ್ತು 18 ವರ್ಷದೊಳಗಿನ ಕಿಶೋರರು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸ ಮಾಡುವುದು ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆಯ ಜೊತೆಗೆ ಪೊಲೀಸ್, ಕಾರ್ಮಿಕ ಇಲಾಖೆ, ಕಂದಾಯ, ಪಂಚಾಯತ್ ರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಕಾರ್ಖಾನೆ ಮತ್ತು ಬಾಯ್ಲರ್‌ಗಳ ಇಲಾಖೆ, ನಗರಾಭಿವರದ್ಧಿ, ರೇಷ್ಮೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೃಷಿ ಹಾಗೂ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಗಳ ಅಧಿಕಾರಿಗಳಲ್ಲಿಯೂ ದೂರು ಸಲ್ಲಿಸಬಹುದು  ಎಂದು ಹೇಳಿದರು.

ಬಾಲಕಾರ್ಮಿಕ ವ್ಯವಸ್ಥೆಗೆ ಒಳಪಟ್ಟ ಮಕ್ಕಳು, ಮಾನಸಿಕ ಹಾಗೂ ದೈಹಿಕವಾಗಿ ಸದೃಡವಾಗಿರುವುದಿಲ್ಲ.  ಈ ಪದ್ಧತಿಗೆ ಅನೇಕ ಸಮಸ್ಯೆಗಳಿದ್ದು, ಮುಖ್ಯವಾಗಿ ಶಿಕ್ಷಣದ ಕೊರತೆ ಕಾರಣ. ಕಡ್ಡಾಯ ಶಿಕ್ಷಣದ ಹಕ್ಕನ್ನು ಪ್ರತಿ ಮಗುವಿಗೆ ದೊರಕಿಸುವುದು ಎಲ್ಲಾ ನಾಗರೀಕರ ಕರ್ತವ್ಯವಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಎಲ್ಲಾ ಪಾಲಕರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕಾನೂನು ಅರಿವು ಅತ್ಯವಶ್ಯಕವಾಗಿದ್ದು, ಈ ಹಕ್ಕುಗಳ ಬಗ್ಗೆ ಮಕ್ಕಳಲ್ಲಿ ಹಾಗೂ ಅವರ ಪಾಲಕರಿಗೆ ಅರಿವು ಮೂಡಿಸಿ ಜಾಗೃತಗೊಳಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ.ಕಡಿ ಅವರು ಮಾತನಾಡಿ, ಮಕ್ಕಳು ರಾಷ್ಟçದ ಸಂಪತ್ತು, ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ಪದ್ಧತಿಯು ಮಕ್ಕಳನ್ನು ದೈಹಿಕ, ಮಾನಸಿಕ ಹಾಗೂ ಆರ್ಥಿಕವಾಗಿ ಶೋಷಣೆಗೆ ಒಳಪಡಿಸಿ, ಶಿಕ್ಷಣ ಅವಕಾಶಗಳನ್ನು ತಡೆಗಟ್ಟುತ್ತದೆ. ಶಿಕ್ಷಣ ವಂಚಿತ ಹಾಗೂ ದುಡಿಮೆಯಲ್ಲಿ ತೊಡಗಿರುವಂತಹ ಮಕ್ಕಳನ್ನು ಮುಖ್ಯವಾಹಿನಿಗೆ ಕರೆ ತರಲು ಕಾಯ್ದೆಯಡಿ ನೇಮಕಗೊಂಡ ನಿರೀಕ್ಷಕರು ಶ್ರಮೀಸಬೇಕು. ಈ ತರಬೇತಿಯ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದೇವೇಂದ್ರ ಪಂಡಿತ್, ಕೊಪ್ಪಳ ಡಿವೈಎಸ್ಪಿ ಶರಣಪ್ಪ ಸುಬೇದಾರ, ಜಿ.ಪಂ ಮುಖ್ಯ ಲೆಕ್ಕಾಧಿಕಾರಿಗಳಾದ ಅಮೀನ್ ಅತ್ತಾರ್, ಜಿಲ್ಲಾ ಕಾರ್ಮಿಕ ಅಧಿಕಾರಿ ವೀಣಾ ಮಾಸ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಎಂ.ಎ ರಡ್ಡೇರ್, ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಯುನಿಸೆಫ್ ಪ್ರಾದೇಶಿಕ ಸಂಯೋಜಕರಾದ ರಾಘವೇಂದ್ರ ಭಟ್, ವ್ಯವಸ್ಥಾಪಕರಾದ ಹರೀಶ ಜೋಗಿ, ಕಾರ್ಮಿಕ ನಿರೀಕ್ಷಕರಾದ ಶಿವಶಂಕರ್ ತಳವಾರು ಹಾಗೂ ಗೋಪಾಲ ದೂಪದ, ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ಬಸವರಾಜ ಹಿರೇಗೌಡ್ರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಬಳಿಕ “ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ-1956, ತಿದ್ದುಪಡಿ ಕಾಯ್ದೆ-2016”ರ ಕುರಿತು ಕಲಂ 16 ಮತ್ತು 17 ರಡಿ ನೇಮಕಗೊಂಡ ನಿರೀಕ್ಷಕರುಗಳಿಗೆ ತರಬೇತಿ ಕಾರ್ಯಕ್ರಮ ಜರುಗಿತು.

error: Content is protected !!